

ಚಾಮರಾಜನಗರ : ಹನೂರು ತಾಲೂಕಿನ ಹುಲುಸುಗುಡ್ಡೆಯ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ನಿವೇಶನ ಮಂಜೂರಾತಿ ಪತ್ರವನ್ನು ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಹನೂರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದರೂ ಘಟಕ ಸ್ಥಾಪಿಸಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಹಲವು ಸರ್ಕಾರಿ ಜಾಗಗಳನ್ನು ಪರಿಶೀಲಿಸಿ ಸರ್ವೇ ಕಾರ್ಯ ನಡೆಸಿದ್ದು, ಮಂಗಲ ಗ್ರಾಮದ ಸ.ನಂ 430/ಎ1ಎ ರಲ್ಲಿ 2.66 ಎಕರೆ, ಕಣ್ಣೂರು ಗ್ರಾಮದ ಸ.ನಂ. 1/ಬಿ1 ರಲ್ಲಿ 1.84 ಎಕರೆ ಒಟ್ಟು 4.50 ಎಕರೆ ಬಸ್ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಲಾಗಿತ್ತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಈ ಜಾಗವನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆರ್‌ಐಗಳಾದ ಮಾದೇಶ್, ಮಹದೇವಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ನಾಗರಾಜು, ಸಾರಿಗೆ ಇಲಾಖೆಯ ಅಧಿಕಾರಿಗಳು ಇದ್ದರು.