

ಚಿತ್ರದುರ್ಗ: ದೇಶದ ಬಹುದೊಡ್ಡ ಗಣೇಶೋತ್ಸವವೆಂದು ಖ್ಯಾತಿ ಪಡೆದಿರುವ ಚಿತ್ರದುರ್ಗದ ಹಿಂದು ಮಹಾಗಣಪತಿ ಶೋಭಾಯಾತ್ರೆ ಸೆ.13 ರಂದು ಜರುಗಲಿದ್ದು, ಡಿಜೆಗಳನ್ನು ಬಳಸಲು ಅವಕಾಶ ಹಾಗೂ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಂಗಳವಾರ ಬೆಂಗಳೂರಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಅವರ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಒತ್ತಾಯಿಸಿದರು.
ಶ್ರೀಗಳ ಮನವಿಗೆ ಸ್ಪಂದಿಸಿದ ಗೃಹಸಚಿವರು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಇದ್ದರು.
ಸಂಚಾರ ಮಾರ್ಗ ಬದಲು: ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಆದೇಶಿಸಿದ್ದಾರೆ. ಮೆರವಣಿಗೆ ಬಿ.ಡಿ.ರಸ್ತೆಯಲ್ಲಿ ಸಾಗಿ ಹೊಳಲ್ಕೆರೆ ರಸ್ತೆ ಮುಖಾಂತರ ಚಂದ್ರವಳ್ಳಿ ತಲುಪಲಿದೆ. ಮೆರವಣೆಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಆದ್ದರಿಂದ ನಗರದ ಚಳ್ಳಕೆರೆ ಗೇಟ್‌ನಿಂದ ಮಹಾತ್ಮಾಗಾಂಧಿ ವೃತ್ತ, ಹೊಳಲ್ಕೆರೆ ಮಾರ್ಗದ ಕಣಿವೆ ಕ್ರಾಸ್‌ವರೆಗೆ ಎಲ್ಲ ಮಾದರಿ ವಾಹನಗಳ ಸಂಚಾರ ನಿಷೇಧಿಸಿದೆ. ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ, ಹೊಳಲ್ಕೆರೆ, ಶಿವಮೊಗ್ಗ ಹಾಗೂ ಭೀಮಸಮುದ್ರ ಕಡೆಯಿಂದ ಬರುವ ಲಘು ಮತ್ತು ಭಾರೀ ವಾಹನಗಳು ಹಾಗೂ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಎನ್‌ಎಚ್-48ರ ಮು ಖಾಂತರ ಬಂದು ನಗರದ ಮೆದೇಹಳ್ಳಿ ರಸ್ತೆ ಮತ್ತು ಜೆಎಂಐಟಿ ವೃತ್ತದ ಮುಖಾಂತರ ನಗರಕ್ಕೆ ಬಂದು ಅದೇ ಮಾರ್ಗದಲ್ಲಿ ಹಿಂತಿರುಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಂಘಟಕರ ವಿರುದ್ಧ ಪ್ರಕರಣ: ಹೊಸದುರ್ಗದಲ್ಲಿ ಸೆ.8ರಂದು ನಡೆದ ವಿರಾಟ್ ಹಿಂದು ಮಹಾ ಗಣಪತಿ ಮೆರವಣಿಯಲ್ಲಿ ಕಲರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ ಸಿಡಿಸಿದ ಸಂಘಟಕರ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಸಮಯದಲ್ಲಿ ಪಟಾಕಿ ಮತ್ತು ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿದ್ದ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಮೆರವಣಿಗೆ ವೇಳೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ಕಲರ್ ಬ್ಲಾಸ್ಟಿಂಗ್ ಹಾಗೂ ಹಿರಿಯೂರು ಸರ್ಕಲ್ ಸಮೀಪ ಪಟಾಕಿ ಸಿಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಂಘಟಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
(ಸಿಟಿಡಿ 9 ಮಾದಾರ ಶ್ರೀ)
ಚಿತ್ರದುರ್ಗ ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ಡಿಜೆಗಳನ್ನು ಬಳಸಲು ಅನುಮತಿ ಕೊಡುವಂತೆ ಬೆಂಗಳೂರಿನಲ್ಲಿ ಮಂಗಳವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭೇಟಿಯಾಗಿ ಒತ್ತಾಯಿಸಿದರು. ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಇದ್ದರು.