ಡಿಜಿಟಲ್ ರೂಪಾಂತರದೊಂದಿಗೆ ಜಗತ್ತು ವಿಕಸನ

2-SanduruP1
Published on

ಸಂಡೂರು: ರಾಷ್ಟ್ರ ನಿರ್ಮಾಣದಲ್ಲಿ ತಾಂತ್ರಿಕ ಶಿಕ್ಷಣ ಪ್ರಮುಖ ಪಾತ್ರವಹಿಸುವುದರೊಂದಿಗೆ ಅಭಿವೃದ್ಧಿಶೀಲ ರಾಷ್ಟ್ರದ ಬೆನ್ನೆಲುಬಾಗಿದೆ ಎಂದು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಘೋರ್ಪಡೆ ಹೇಳಿದರು.

ಯಶವಂತನಗರ ಗ್ರಾಮದ ಸಂಡೂರು ಪಾಲಿಟೆಕ್ನಿಕ್‌ನ 36ನೇ ವಾರ್ಷಿಕೋತ್ಸವದಲ್ಲಿ ಶನಿವಾರ ಮಾತನಾಡಿದರು. ಸಂಡೂರು ಪಾಲಿಟೆಕ್ನಿಕ್‌ನಂತಹ ಸಂಸ್ಥೆಗಳು ಯುವ ಜನರ ಭವಿಷ್ಯ ರೂಪಿಸುವಲ್ಲಿ, ಉದ್ಯಮ ಮತ್ತು ಆರ್ಥಿಕತೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಸಹಕಾರಿಯಾಗಿವೆ ಎಂದರು.

ಅಗತ್ಯ ಕೌಶಲ್ಯ, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ರೂಪಾಂತರದಲ್ಲಿನ ಪ್ರಗತಿಯೊಂದಿಗೆ ಜಗತ್ತು ವೇಗವಾಗಿ ವಿಕಸನಗೊಳ್ಳುತ್ತಿದೆ. ಈ ದಿಸೆಯಲ್ಲಿ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಾಗಿ, ಕ್ರಾಂತಿಯ ಮುಂಚೂಣಿಯಲ್ಲಿದ್ದೀರಿ. ನೀವು ಪಡೆಯುವ ಜ್ಞಾನ ತರಗತಿಗಳ ನಾಲ್ಕು ಗೋಡೆಗಳ ಒಳಗೆ ಉಳಿಯಬಾರದು ಅದನ್ನು ನೈಜ ಜಗತ್ತಿನ ಸವಾಲುಗಳನ್ನು ಎದುರಿಸಲು ಅನ್ವಯಿಸಬೇಕು ಎಂದು ಹೇಳಿದರು.

ಸೇಲ್ಸ್‌ಫೋರ್ಸ್ ಇಂಡಿಯಾ ಕಂಪನಿ ಉತ್ಪಾದನಾ ವಿಭಾಗದ ವ್ಯವಸ್ಥಾಪಕಿ ಪಿ.ಆರ್.ಸೀತಾಲಕ್ಷ್ಮೀ ಮಾತನಾಡಿ, ನಾನು ಕೂಡ ಸಂಡೂರು ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದೇನೆ ಎಂದು ಕಾಲೇಜಿನ ದಿನಗಳನ್ನು ಮೆಲುಕು ಹಾಕಿದರು. ವಾರ್ಷಿಕ ಸಾಂಸ್ಕೃತಿಕ ಸ್ಫರ್ಧೆ, ಕ್ರಿಡಾಕೂಟ, ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಪಾಲಿಟೆಕ್ನಿಕ್ ಪ್ರಾಚಾರ್ಯ ಅಲಿಮ್ ಅಹಮ್ಮದ್, ರಾಜವಂಶಸ್ಥ ಏಕಾಂಬರ್ ಎ.ಘೋರ್ಪಡೆ, ಎಸ್‌ಇಎಸ್ ಕಾರ್ಯದರ್ಶಿ ಜಗದೀಶ ಬಸಾಪುರ, ಎಸ್‌ಎಸ್‌ಎಸ್ ಕಾರ್ಯದರ್ಶಿ ಆಶಿಯಾ ಬಾನು, ಎಸ್‌ಜಿಆರ್‌ಎಸ್ ಶಾಲೆಯ ಪ್ರಾಂಶುಪಾಲೆ ಚಂದ್ರಿಕಾ, ಎಸ್‌ಆರ್‌ಎಸ್ ಶಾಲೆಯ ಪ್ರಾಂಶುಪಾಲ ಅವಿನಾಶ್ ತ್ಯಾಗಿ, ಯಶವಂತನಗರ ಗ್ರಾಪಂ ಸದಸ್ಯ ಶಿವನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net