ಡಿಜಿಟಲೀಕರಣವಾಗದ ಸಾರಿಗೆ ಸಂಸ್ಥೆ

2 Bpt 1
Published on

ಬಂಗಾರಪೇಟೆ: ಎಲ್ಲ ಕಡೆ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ ನೀಡುತ್ತಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಇನ್ನೂ ಅಪ್‌ಡೇಟ್ ಆಗದಿರುವುದು ಸಂಸ್ಥೆಯ ಅಧಿಕಾರಿಗಳ ಆಲಸ್ಯತನಕ್ಕೆ ಕನ್ನಡಿಯಾಗಿದೆ.

ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಭೀಮ್ ಆ್ಯಪ್ ಬಿಡುಗಡೆ ಮಾಡಿದೆ. ಅದರೊಂದಿಗೆ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಣದ ವ್ಯವಹಾರವನ್ನು ಸುಲಭವಾಗಿ ಮಾಡಬಹುದಾಗಿದೆ.

ವಿಮಾನಯಾನ, ರೈಲ್ವೆ ಇಲಾಖೆ, ಸೇರಿ ಖಾಸಗಿ ಸಾರಿಗೆ ಸಂಸ್ಥೆಗಳು ಡಿಜಿಟಲೈಸ್ ವ್ಯವಸ್ಥೆಗೆ ಹೊಂದಿಕೊಂಡಿವೆ. ಆದರೆ ರಾಜ್ಯದ ಜನರಿಗೆ ಸಾರಿಗೆ ಸೌಕರ್ಯ ಒದಗಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಜಿಟಲೈಸ್ ಆಗದೆ ಹಿಂದಿನ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ.

ಬಸ್ ನಿರ್ವಾಹಕರೂ ಸರಿಯಾಗಿ ಟಿಕೆಟ್ ನೀಡುವುದಿಲ್ಲ, ಸರಿಯಾಗಿ ಚಿಲ್ಲರೆ ನೀಡುವುದಿಲ್ಲ, ಬೇರೆ ಪ್ರಯಾಣಿಕರಿಗೆ ನೀಡಿದ ಟಿಕೆಟ್ ವಾಪಸ್ ಪಡೆದು ಮತ್ತೊಬ್ಬ ಪ್ರಯಾಣಿಕರಿಗೆ ಮರು ವಿತರಣೆ ಮಾಡಿ ಈ ಟಿಕೆಟ್‌ನ ಹಣವನ್ನು ಜೇಬಿಗೆ ಹಾಕಿಕೊಳ್ಳುತ್ತಿರುವುದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ ಎಂಬ ಆರೋಪವಂತೂ ಸಾಮಾನ್ಯವಾಗಿದೆ.

ಈ ಬಗ್ಗೆ ಹಲವಾರು ಬಾರಿ ಚಾಲಕ, ನಿರ್ವಾಹಕ ಮತ್ತು ತಪಾಸಣಾ ನಿರೀಕ್ಷಕರ ವಿರುದ್ಧ ಸಾರ್ವಜನಿಕರು ಸಂಸ್ಥೆಗೆ ದೂರು ನೀಡಿದ್ದರೂ ಅವರ ವಿರುದ್ಧ ಕ್ರಮ ಜರುಗಿಸುವಲ್ಲಿ ಸಂಸ್ಥೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅಮಾನತು ಮಾಡಿದ ನಂತರ ಬೇರೆಡೆ ವರ್ಗಾವಣೆ ಮಾಡಬೇಕಾಗಿದ್ದರೂ ಸಿಬ್ಬಂದಿ ಪ್ರತಿಷ್ಠೆಗಾಗಿ ಅವರನ್ನು ಅದೇ ಮಾರ್ಗದಲ್ಲಿ ಮರು ನಿಯೋಜಿಸುವುದು ಸಂಸ್ಥೆಯ ನಿಯಮದ ವಿರುದ್ಧವಾಗಿದ್ದರೂ ಹಿರಿಯ ಅಧಿಕಾರಿಗಳು ಇದನ್ನೇ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಸಂಸ್ಥೆಯ ಸಿಬ್ಬಂದಿ ಕನಿಷ್ಠ ಶಿಸ್ತು ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಟಿಕೆಟ್‌ಗೆ ಎಲ್ಲ ಸಂದರ್ಭದಲ್ಲೂ ನಗದಿಗಾಗಿ ಒತ್ತಾಯಿಸದೆ ಇತರ ಸಾರಿಗೆ ವ್ಯವಸ್ಥೆಯಲ್ಲಿ ಅಳವಡಿಸಿರುವ ಡಿಜಿಟಲ್ ಕರೆನ್ಸಿ ಸ್ವೀಕರಿಸುವುದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಂಡು ಚಾಲಕರ ತಪ್ಪನ್ನು ಮರೆಮಾಚುವುದಕ್ಕಾಗಿ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಿ ದಂಡ ವಸೂಲಿ ನಿಲ್ಲಿಸಬೇಕಾಗಿದೆ.

ಡಿಜಿಟಲ್ ಕರೆನ್ಸಿ ಸ್ವೀಕರಿಸಲು ಸರ್ಕಾರದಿಂದ ಆದೇಶವಾಗಬೇಕು. ಚಿಲ್ಲರೆ ಕೊಡಲ್ಲ, ಟಿಕೆಟ್ ಮಾರಿಕೊಳ್ಳುತ್ತಾರೆ ಎಂದು ನಿರ್ವಾಹಕರನ್ನು ದೂರುವ ಬದಲಾಗಿ ಪ್ರಯಾಣಿಕರು ಸರಿಯಾದ ಚಿಲ್ಲರೆ ನೀಡಿದರೆ ಸಮಸ್ಯೆ ಇರುವುದಿಲ್ಲ. ಸಣ್ಣ ರೈತರು ತರುವ ಉತ್ಪಾದನೆ ನಿರಾಕರಿಸುವುದಿಲ್ಲ. ಸಿಬ್ಬಂದಿ ವಿರುದ್ಧ ಲಿಖಿತ ದೂರು ಬಂದರೆ ತನಿಖೆ ನಡೆಸಿ ದೂರು ಸತ್ಯವಾದರೆ ಮಾತ್ರ ಕ್ರಮ ಜರುಗಿಸಲಾಗುವುದು. ಭಾಸ್ಕರ್, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ, ಕೆಜಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net