

ಕಮಲನಗರ: ಡಿಗ್ಗಿ ಗ್ರಾಮದ ಬೀದಿ ದೀಪಗಳ ಅಳವಡಿಕೆ, ರಸ್ತೆ, ಚರಂಡಿ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ೫೦ ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಡಿಗ್ಗಿ ಗ್ರಾಮದ ಮಡಿವಾಳೇಶ್ವರ ಮಂದಿರದಲ್ಲಿ ಮಂಗಳವಾರ ಕುಟುಂಬ ಸಮೇತ ರುದ್ರಾಭಿಷೇಕ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಇತಿಹಾಸ ಪ್ರಸಿದ್ಧವಾದ ಮಡಿವಾಳೇಶ್ವರ ಮಂದಿರ ಇರುವ ಡಿಗ್ಗಿ ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವ ತನಕ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಸಚಿವ ಖಂಡ್ರೆ ಅಭಯ ನೀಡಿದರು.
ಕಾಂಗ್ರೆಸ್ ಮುಖಂಡ ಭೀಮಸೇನರಾವ ಶಿಂಧೆ, ಡಾ.ಗೀತಾ ಖಂಡ್ರೆ, ಪ್ರಕಾಶ ಟೊಣ್ಣೆ, ಆನಂದ ಚವ್ಹಾಣ್, ಪ್ರವೀಣ ಪಾಟೀಲ್, ಸಂತೋಷ ಬಿರಾದಾರ, ಭೀಮರಾವ ಪಾಟೀಲ್, ಬಾಬುರಾವ ಪಾಟೀಲ್ ಹೊರಂಡಿ, ಸುಭಾಷ ಮಿರ್ಚೆ, ಪ್ರಕಾಶ ಮಾನಕರಿ, ಶೇಖರ ಒಂಕೆ, ಮಡಿವಾಳಪ್ಪ ಮುರ್ಕೆ, ವಿಜಯಕುಮಾರ ಪಾಟೀಲ್, ಹಣಮಂತ ಚವ್ಹಾಣ್, ಉಮಾಕಾಂತ ಪಾಟೀಲ್, ಸಂತೋಷ ಪಾಟೀಲ್, ಯಶವಂತ ಬಿರಾದಾರ, ಪ್ರೊ.ಎಸ್.ಎನ್.ಶಿವಣಕರ ಇತರರಿದ್ದರು.
ಶಿವರಾಜ ಪಾಟೀಲ್ ಸ್ವಾಗತಿಸಿದರು. ದೇವೇಂದ್ರ ಪಾಟೀಲ್ ವಂದಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಭವ್ಯ ಮೆರವಣಿಗೆ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ದಂಪತಿಗೆ ಡಿಗ್ಗಿ ಗ್ರಾಮದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದ ಸಾರ್ವಜನಿಕರು, ಬಳಿಕ ಸಾರೋಟಿನಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಅಗ್ಗಿ ಬಸವಣ್ಣ ಮಂಟಪದಿಂದ ಗ್ರಾಮದ ಪ್ರಮುಖ ರಸ್ತೆ ಮೂಲಕ ಮಡಿವಾಳೇಶ್ವರ ಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡು ಜಯ ಘೋಷ ಕೂಗಿದರು.
ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಔರಾದ್ ಕೂಡ ಒಂದಾಗಿದೆ. ಹೀಗಾಗಿ ತಾಲೂಕಿನ ಅಭಿವೃದ್ಧಿಗಾಗಿ ಕಕ ಅಭಿವೃದ್ಧಿ ಮಂಡಳಿಯಲ್ಲಿ ಹೆಚ್ಚಿನ ಅನುದಾನ ಕಲ್ಪಿಸಲಾಗಿದೆ. ಜನರು ನಮ್ಮ ಕುಟುಂಬದ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಋಣ ತೀರಿಸುವೆ.
| ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ