

ಮೈಸೂರು: ಚಾಮುಂಡಿಬೆಟ್ಟ ಎಂಬುದು ಧಾರ್ಮಿಕ ಭಾವನೆಯನ್ನು ಪರಸ್ಪರ ಗೌರವಿಸುವ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತನ್ನು ಸರಿಯಾಗಿ ಅರ್ಥೈಸದೇ ಅದನ್ನು ವಿವಾದ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ
ಎಲ್ಲರೂ ಕೂಡಿ ಏಕತೆಯಿಂದ ಆಚರಿಸುವ ದಸರಾ ನಾಡಹಬ್ಬಕ್ಕೆ ಬಹುದೊಡ್ಡ ಪರಂಪರೆ ಇದೆ. ಇಂತಹ ನಾಡಹಬ್ಬದಲ್ಲೂ ಧಾರ್ಮಿಕ ವಿಷವನ್ನು ಬಿತ್ತುವ ಕೆಲಸ ಮಾಡುತ್ತಿರುವ ಬಿಜೆಪಿಗರಿಗೆ ನಿಜಕ್ಕೂ ಈ ನೆಲದ ಬಹುತ್ವದ ವಿಷಯಗಳಾಗಲಿ, ಸಂವಿಧಾನವು ನೇರವಾಗಿ ಸಾರುತ್ತಿರುವ ಭಾವೈಕ್ಯತೆಯಾಗಲಿ ಅರ್ಥವಾಗುತ್ತಿಲ್ಲ ಎಂದು ಪ್ರಕಟಣೆಯಲ್ಲಿತಿರುಗೇಟು ಕೊಟ್ಟಿದ್ದಾರೆ.
ಚುನಾವಣಾ ರಾಜಕೀಯದ ದೃಷ್ಟಿಯಿಂದ ಕೋಮು ರಾಜಕಾರಣ ಮಾಡುತ್ತಿರುವ ಬಿಜೆಪಿಗರಿಗೆ ಎಂದಿಗೂ ಜನರ ಬದುಕು ಮತ್ತು ಅವರ ಅನ್ನದ ವಿಷಯದಲ್ಲಿ ಕಿಂಚಿತ್ ಆಲೋಚನೆ ಇಲ್ಲ ಎಂದೂ ಕಿಡಿಕಾರಿದ್ದಾರೆ.
ಭಾವೈಕ್ಯತೆಗೆ ವಿರುದ್ಧವಾಗಿ ವರ್ತಿಸುವ ಮತ್ತು ಕನ್ನಡ ಸಾಹಿತ್ಯ ಮತ್ತು ಅದರ ಜೀವಪರ ಪ್ರಾಮುಖ್ಯತೆಯನ್ನು ಮರೆತು ಕನ್ನಡತನಕ್ಕೆ ಅವಮಾನ ಮಾಡುತ್ತಿರುವ ಕೋಮುವಾದಿ ಬಿಜೆಪಿಗರು ಮತ್ತೊಮ್ಮೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಸಂದರ್ಭ ಬರಲಿದೆ ಎಂದು ಎಚ್ಚರಿಸಿದ್ದಾರೆ
ಬಿಜೆಪಿಗರ ಸಂವಿಧಾನ ವಿರೋಧಿ ಪ್ರಯತ್ನವನ್ನು ಎಲ್ಲರೂ ಒಗ್ಗೂಡಿ ಖಂಡಿಸೋಣ, ನಾಡಹಬ್ಬವನ್ನು ಬಾಂಧವ್ಯದ ಗೂಡಾಗಿಸೋಣ ಎಂದು ಹೇಳಿದ್ದಾರೆ.