ಡಿಕೆಶಿ ಜೊತೆಗಿನ ಪಿಸುಮಾತಿಗೆ ಬೇರೆ ಅರ್ಥ ಬೇಡ

images (1)
Published on

ಬಾಗಲಕೋಟೆ: ಜಮಖಂಡಿ ಪಟ್ಟಣದಲ್ಲಿ ಬುಧವಾರ ನಡೆದ ಜಮಖಂಡಿ ಅರ್ಬನ್ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೊತೆಗೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರ ಪಕ್ಕಕ್ಕೆ ಹೋಗಿ ಕುಳಿತು ಪಿಸುಮಾತುಗಳನ್ನು ಆಡಿರುವ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಸ್ವತಃ ನಿರಾಣಿ ಅವರು, ಡಿಕೆಶಿ ಜೊತೆ ವೇದಿಕೆಯಲ್ಲಿ ಮಾತನಾಡಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ನಿರಾಣಿ ಅವರು, ನಮ್ಮ ಆತ್ಮೀಯ ಸ್ನೇಹಿತರಾದ ಡಿಕೆಶಿ ಅವರು ಇಲ್ಲಿಗೆ ಬಂದಿದ್ದರು. ಈ ಭಾಗದ ನೀರಾವರಿ ಯೋಜನೆ ಆಮೆಗತಿಯಲ್ಲಿ ನಡೆಯುತ್ತಿದ್ದು, ಅವುಗಳಿಗೆ ವೇಗ ಸಿಗಲಿ ಎಂದು ಚರ್ಚೆ ಮಾಡಿದ್ದೇನೆ. ಹೊಸ ಹೊಸ ಯೋಜನೆ ಮಾಡಬೇಕು. ಆಲಮಟ್ಟಿ ಜಲಾಶಯವನ್ನು ೫೨೪.೨೫೬ ಮೀಟರ್‌ಗೆ ಎತ್ತರಿಸಿ, ರೈತರಿಗೆ ಪರಿಹಾರ ಕೊಡಬೇಕು ಎಂದು ಮಾತನಾಡಿದ್ದೇನೆ. ಅದಕ್ಕೆ ಅವರು ಸ್ಪಂದನೆ ನೀಡಿದ್ದಾರೆ.

ಹಾಗೆಯೇ ಅವರು ಸಹ ನಮ್ಮ ಕಾರ್ಖಾನೆಗಳು ಯಾವ ರೀತಿ ನಡೆಯುತ್ತಿವೆ. ರೈತರಿಗೆ ಯಾವ ಪರಿಹಾರಕೊಡುತ್ತಿದ್ದೀರಿ ಎಂದು ಕೇಳಿದರು. ಇದೆಲ್ಲ ಸ್ನೇಹದ ರೂಪದಲ್ಲಿ ಮಾತುಕತೆ ಆಯಿತು ಎಂದರು.

ಇತ್ತೀಚಿಗೆ ಬಿಜೆಪಿ ನಾಯಕರ ಜೊತೆ ಡಿಕೆಶಿ ಕಾಣಿಸಿಕೊಂಡ ವಿಚಾರವಾಗಿ, ಕೆಲವೊಂದು ಪಕ್ಷದಲ್ಲಿ ಇರುವಂತವರು, ನಮ್ಮ ಪಕ್ಷದ ಸರ್ಕಾರದಿಂದ ಏನಾದರೂ ಕೆಲಸ ಬೇಕಾದರೆ ಭೇಟಿ ಮಾಡುತ್ತಾರೆ. ಬೇರೆ ಬೇರೆ ಮಂತ್ರಿಗಳ ಜೊತೆಗೆ ಶಾಸಕರ ಜೊತೆ ನಾವು ಭೇಟಿ ಆಗಿರುತ್ತೇವೆ. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇಲ್ಲಿಯವರು ಆಯಾ ಇಲಾಖೆಗಳ ಕೆಲಸದ ನಿಮಿತ್ಯ ಭೇಟಿ ಆಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಈಗ ನಾನು ಶಿವಕುಮಾರ ಅವರ ಜೊತೆ ಮಾತನಾಡಿದೆ ಎಂದರೆ ಡಿಕೆಶಿ ಅವರು ಬಿಜೆಪಿಗೆ ಬರುತ್ತಾರೆ ಅಥವಾ ಮುರುಗೇಶ್ ನಿರಾಣಿ ಕಾಂಗ್ರೆಸ್‌ಗೆ ಬರುತ್ತಾರೆ ಅಂತ ಅಲ್ಲ ಎಂದರು.

ಡಿಕೆಶಿ ಅವರು ಬಿಜೆಪಿಗೆ ಬರುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಿರಾಣಿ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿ ಯಾವತ್ತೂ ಮಥೆಮ್ಯಾಟಿಕ್ಸ್ ಆಗಲ್ಲ. ಏನೇ ಇದ್ದರೂ ಕೆಮೆಸ್ಟಿç ಅದು. ಟು ಪ್ಲಸ್ ಟು -ೆÇÃರ್ ಆಗಬಹುದು, ಟೆನ್ ಸಹ ಆಗಬಹುದು. ಅದೇ ರೀತಿ ಇಲ್ಲಿ ಯಾರೂ ಶಾಶ್ವತ ವೈರಿಗಳಲ್ಲ. ಯಾರೂ ಮಿತ್ರರೂ ಅಲ್ಲ. ಡಿಕೆಶಿ ಅವರು ಪಕ್ಷಕ್ಕೆ ಬರುವುದು ನಮ್ಮ ನಡುವೆ ಇಲ್ಲ. ಏನು ನಡೆಯುತ್ತದೆ ಅದು ನಾಲ್ಕು ಗೋಡೆಗಳ ಮಧ್ಯ ನಡೆಯುತ್ತದೆ. ಆದರೆ ಒಂದು ಮಾತ್ರ ಸತ್ಯ. ಡಿಕೆಶಿ ಭೇಟಿ ಆಗುತ್ತಿರುವುದು ಕರ್ನಾಟಕಕ್ಕೆ ಅನುಕೂಲಕ್ಕಾಗಿ ಎಂದು ನಿಗೂಢವಾಗಿ ಹೇಳಿದರು.

ಮೌಲ್ಯಾಧಾರಿತ ರಾಜಕಾರಣ ಆಗಬೇಕು:

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, ಅವರು ಒಬ್ಬ ಅನುಭವಿ ರಾಜಕಾರಣಿ ಇದ್ದಾರೆ. ಹಿಂದೆ ಹೊಸದಾಗಿ ಪಕ್ಷ ಮಾಡಿದವರು ಯಾರೂ ಯಶಸ್ವಿಯಾಗಿಲ್ಲ ಎನ್ನುವುದು ಚಿಕ್ಕಮಕ್ಕಳಿಗೂ ಗೊತ್ತು. ಅದನ್ನು ಬಿಡಿಸಿ ಹೇಳಬೇಕಾಗಿಲ್ಲ. ಈಗಾಗಲೇ ಎರಡು ಸಲ ಉಚ್ಛಾಟನೆಗೊಂಡು, ಈಗ ಮತ್ತೆ ಉಚ್ಛಾಟನೆ ಆಗಿದೆ. ಉಚ್ಛಾಟನೆ ಮಾಡುತ್ತಾರೆ, ಮತ್ತೆ ವಾಪಸು ಕರೆದುಕೊಳ್ಳುತ್ತಾರೆ ಎಂದು ಈ ರೀತಿ ಆಗಬಾರದು. ಒಂದು ಮೌಲ್ಯಾಧಾರಿತ ರಾಜಕಾರಣ ಆಗಬೇಕು ಎಂದರು.

ಯತ್ನಾಳ್ ಅವರು ಹೊಸ ಪಕ್ಷ ಮಾಡುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರಿಗೆ ಸಲಹೆ ಕೊಡುವುದು ನಾನು ಅಲ್ಲ, ರಾಜ್ಯದಲ್ಲಿ ಯಾರೂ ಇಲ್ಲ. ಸ್ವಂತ ಇಚ್ಛೆಯಿಂದ ಏನು ನಿರ್ಧಾರ ಮಾಡುತ್ತಾರೋ ಮಾಡಲಿ. ನಿಮಗೆ ಉತ್ತರ ಕರ್ನಾಟಕದ ಬಗ್ಗೆ ಇರುವ ಕಾಳಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಸ್ವತಃ ಅವರೇ ಹೊಸ ಪಕ್ಷ ಕಟ್ಟುವ ಬಗ್ಗೆ ನಿರ್ಧಾರ ಮಾಡಿಲ್ಲ, ವಿಚಾರ ಮಾಡುತ್ತಿದ್ದು, ಸರ್ವೆ ಮಾಡುತ್ತಾ ಇದ್ದೀನಿ ಎಂದು ಹೇಳಿದ್ದಾರೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net