ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿದರೆ ಶಾಸಕರು ಭಾಗವಹಿಸುವುದಿಲ್ಲ. ಜಿಲ್ಲೆಗೆ ನ್ಯಾಯ ಸಿಗಬೇಕಾದರೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಬೇಕು ಎಂದು ಜೆಡಿಎಸ್, ಬಿಜೆಪಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರಗೆ ಆಗ್ರಹಿಸಿದರು. ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ, ಹೇಮಾವತಿ ಎಕ್ಸ್ಪ್ರೆಸ್ ಕೆನಾಲ ವಿರೋಧಿಸಿ ಪ್ರತಿಭಟನೆ ಸಂದರ್ಭದ ಅಹಿತಕರ ಟನೆಗೆ ವಿಷಾಧಿಸುತ್ತೇನೆ. ಸಿಎಂ, ಡಿಸಿಎಂ ಜತೆ ಮಾತನಾಡಿದ್ದೇನೆ. ನಿಮ್ಮೆಲ್ಲರ ಅಪೇಕ್ಷೆಯಂತೆ ಸಭೆ ನಡೆಸಲು ಉದ್ದೇಶಿಸಲಾಗಿದೆ. ಜೂ.30ಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಮಯ ನಿಗದಿಪಡಿಸಿದ್ದಾರೆ. ಶಾಸಕರು, ರೈತ ಮುಖಂಡರು, ಹೋರಾಟಗಾರರಿಗೆ ಸದ್ಯದಲ್ಲೇ ಸಭೆ ಸೂಚನಾ ಪತ್ರ ಬರಲಿದೆ. ಆ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ತುಮಕೂರು ಜಿಲ್ಲೆಯ ಪಾಲಿನ ಮರಣ ಶಾಸನ ಎನ್ನಿಸಿರುವ ಯೋಜನೆಯ ರೂವಾರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆದರೆ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ಅರಿವಿದೆ, ಅವರ ಸಭೆಯಲ್ಲಿ ನಾವು ಭಾಗವಹಿಸಿದರೆ ಕಟುಕನ ಮುಂದೆ ಕುರಿ ಹೋದಂತೆ ಎಂದು ಆಕ್ಷೇಪಿಸಿದರು. "ನೀವು ಜಿಲ್ಲೆಯ ಪಾಲಿಗೆ ಈಗ ತಂದೆಯ ಸ್ಥಾನದಲ್ಲಿದ್ದೀರಿ. ನೀವು ನಮ್ಮನ್ನು ರಕ್ಷಿಸಬೇಕು, ಆತ್ಮದಿಂದ ಮಾತನಾಡಬೇಕು ಹಾಗೂ "ನೀವು ನಮ್ಮ ಜತೆ ನಿಲ್ಲಬೇಕು' ಎಂದು ಸಭೆಯಲ್ಲಿದ್ದ ಬಿಜೆಪಿ, ಜೆಡಿಎಸ್ ಶಾಸಕರು ಡಾ.ಜಿ.ಪರಮೇಶ್ವರಗೆ ಒತ್ತಾಯಿಸಿದರು. ಅದಕ್ಕೆ ಡಾ.ಜಿ.ಪರಮೇಶ್ವರ, "ನಾನು ನಿಮ್ಮ ಹಾಗೂ ಜಿಲ್ಲೆಯ ಹಿತವನ್ನು ರಕ್ಷಣೆ ಮಾಡುತ್ತೇನೆ' ಎಂದು ಭರವಸೆ ನೀಡಿದರು.