ಡಿಕೆ ಸಹೋದರರನ್ನು ಕುಣಿಗಲ್‌ನಿಂದ ಓಡಿಸಬೇಕಿದೆ

1
Published on

ತ್ರಿದುರ್ಗ: ತಾಲೂಕಿನ ವಿವಿಧ ಭಾಗದ 500ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಕುಣಿಗಲ್ ತಾಲೂಕಿನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತಾಲೂಕಿನ ಅಂಚೇಪಾಳ್ಯ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯೆ ಭಾಗ್ಯಮ್ಮ, ಕೆಂಪೀರೇಗೌಡ, ತಾಪಂ ಮಾಜಿ ಅಧ್ಯಕ್ಷ ಕೆಂಪೇಗೌಡ, ಬೈರೇಗೌಡ, ಸೇರಿದಂತೆ ತಾಲೂಕಿನ ಪ್ರಮುಖ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕುಣಿಗಲ್‌ನಲ್ಲಿ ಕಾಂಗ್ರೆಸ್ ಖಾಲಿಯಾಗಲು ಡಿಕೆ ಸಹೋದರರೇ ಕಾರಣ, ಅವರ ದುಷ್ಟ ರಾಜಕಾರಣಕ್ಕೆ ಬೇಸತ್ತು ಕಾರ್ಯಕರ್ತರು, ಮುಖಂಡರು ಸಾಮೂಹಿಕವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ನಾನು ನ್ಯಾಯಾಧೀಶನ ಹುದ್ದೆ ತೊರೆದು ರಾಜಕಾರಣ ಆರಂಭಿಸಿದಾಗ ಕಾಂಗ್ರೆಸ್ ಕಟ್ಟಲು ಎದುರಿಸಿದ್ದು ಹಿರಿಯ ಮುಖಂಡ ಜನತಾದಳದ ವೈ.ಕೆ.ರಾಮಯ್ಯ ಅಂತಹ ಧೀಮಂತ ನಾಯಕನ ವಿರುದ್ಧ. ಕಾಂಗ್ರೆಸ್ ಕಟ್ಟಲು ನಾನೂ ಸೇರಿದಂತೆ ಸಾವಿರಾರು ಕಾರ್ಯಕರ್ತರ ಬೆವರು ಇದೆ. ಆದರೆ, ಇಂದು ಡಿಕೆ ಕುಟುಂಬದ ಪಕ್ಷವಾಗಿದೆ ಎಂದರು.
ನನ್ನ ರಾಜಕೀಯದ ಮೊದಲ ಚುನಾವಣೆಯಲ್ಲಿಯೇ ಕೊಟ್ಟ ಬಿ.ಫಾರಂ ಕಿತ್ತುಕೊಂಡು ಕೆ.ಲಕ್ಕಪ್ಪ ಅವರಿಗೆ ಸಿ.ಫಾರಂ ಕೊಟ್ಟರು. ನಂತರ 10 ವರ್ಷ ಶಾಸಕನಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದರೂ ನನಗೆ 2008ರಲ್ಲಿ ಕುಣಿಗಲ್ ಹಾಗೂ ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಕೇಳಿದರೂ ಕೊಡಲಿಲ್ಲ ಎಂದರು.
ಜೆಡಿಎಸ್ ಸೇರ್ಪಡೆಯಾದಾಗ 2009ರಲ್ಲಿ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, 2013ರಲ್ಲಿ ನನಗೆ ಬಿ.ಫಾರಂ ನೀಡಿದ್ದ ನಂತರ ಬೇರೊಬ್ಬರಿಗೆ ಸಿ.ಫಾರಂ ಕೊಟ್ಟು ನನಗೆ ಅಲ್ಲೂ ವಂಚಿಸಲಾಯಿತು. 2014ರಲ್ಲಿ ಕಾಂಗ್ರೆಸ್ ಮುಖಂಡರು ಸಹಕಾರದಿಂದ ಸಂಸತ್ ಸದಸ್ಯನಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದರೂ ಕುತಂತ್ರ ಮಾಡಿದರು ಎಂದು ಆಕ್ರೋಶ ಹೊರಹಾಕಿದರು.
ನನ್ನ ರಾಜಕೀಯ ಜೀವನದಲ್ಲಿ ಸದಾ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದೆ, ಇವರ ಸಿಎಂ ಕುರ್ಚಿಗೆ ಅಡ್ಡಗಾಲಾಗಿರಲಿಲ್ಲ ಎಂದು ಭಾವುಕರಾದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಮಾಜಿ ಶಾಸಕ ಬಿ.ಸುರೇಶ್‌ಗೌಡ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಎಚ್.ಡಿ.ರಾಜೇಶ್‌ಗೌಡ, ಬಲರಾಮ್ ಮತ್ತಿತರರು ಇದ್ದರು.


ಡಿಕೆ ಸಹೋದರರ ಪಿತೂರಿಯಲ್ಲಿ ಪರಮೇಶ್ವರ್ ಕೂಡ ಭಾಗಿ!
ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರರ ಜತೆಗೆ ಡಾ.ಜಿ.ಪರಮೇಶ್ವರ್ ಕೂಡ ಪಿತೂರಿ ನಡೆಸಿ ನಾನು ಎರಡನೇ ಸಲ ಲೋಕಸಭೆ ಸದಸ್ಯನಾಗದಂತೆ ತಡೆದರು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೊಸ ಬಾಂಬ್ ಹಾಕಿದರು.ನನ್ನ ರಾಜಕೀಯವಾಗಿ ಮುಗಿಸುವ ಸಲುವಾಗಿಯೇ ದೇವೇಗೌಡರನ್ನು ಬಲವಂತವಾಗಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಿದ್ದರು. ಈ ಸಂದರ್ಭದಲ್ಲಿ ಡಿಕೆ ಸಹೋದರರು ನನಗೆ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಬಲವಂತ ಕೂಡ ಮಾಡಿದ ಮರ್ಮವೇನು ಎಂದರು.
ಡಿಕೆ ಸಹೋದರರು ನನ್ನನ್ನು ಜೆಡಿಎಸ್‌ಗೆ ಹೋಗುವಂತೆ ಒತ್ತಾಯಿಸಿದ್ದಕ್ಕೆ ಡಾ.ಜಿ.ಪರಮೇಶ್ವರ್, ಬಿ.ಎನ್.ಚಂದ್ರಪ್ಪ ಹಾಗೂ ದಿ.ದೃವನಾರಾಯಣ ಕೂಡ ಸಾಕ್ಷಿಯಾಗಿದ್ದಾರೆ ಎಂದರು.
ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕ ಎರಡನೇ ಸಲ ಲೋಕಸಭೆಗೆ ಹೋದರೆ ರಾಜಕೀಯವಾಗಿ ಎಲ್ಲಿ ಪ್ರಭಾವಿಯಾಗಬಹುದು ಎಂದು ಕೆಟ್ಟ ಯೋಚನೆಯಿಂದ ಸೀಟು ತಪ್ಪಿಸಿದಿರಿ ಎಂದು ನೇರವಾಗಿಯೇ ಆರೋಪಿಸಿದರು.
ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಅಧಿಕಾರಕ್ಕೆ ಬೇಕು ಆದರೆ, ನಾನು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ನಾನು ಕಾಂಗ್ರೆಸ್‌ನಲ್ಲಿದ್ದಾಗಲೇ ಯಡಿಯೂರಿನಲ್ಲಿ ರಂಗನಾಥ್‌ಗೆ ಟಿಕೆಟ್ ಎಂದು ಉದ್ಧಟನದಿಂದ ಮಾತನಾಡಿದ್ದ ಸಂಸದ ಡಿ.ಕೆ.ಸುರೇಶ್‌ಗೆ ಕುಣಿಗಲ್‌ನಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಒಕ್ಕಲಿಗ ಸಮುದಾಯದ ಹಿರಿಯರಾದ ಎಚ್.ಡಿ.ದೇವೇಗೌಡರೂ ನನಗೆ ಟಿಕೆಟ್ ಬಿಟ್ಟುಕೊಡಬೇಕಿತ್ತು, ಅವರು ಹೇಳುತ್ತಾರೆ ಎಂದು ನಾನು ಕೊನೆಯವರೆಗೂ ಕಾದೆ, ಆದರೆ, ಅವರಿಗೂ ಅಂತಹ ದೊಡ್ಡಗುಣ ಬರಲೇ ಇಲ್ಲ, ಅವರನ್ನು ಇದೇ ಕಾಂಗ್ರೆಸ್ ಮುಖಂಡರೂ ಕರೆತಂದು ವ್ಯವಸ್ಥಿತವಾಗಿ ಸೋಲಿಸಿ ಇಳಿವಯಸ್ಸಿನಲ್ಲಿ ಅವಮಾನ ಮಾಡಿದರು ಎಂದರು.


ಜಿಲ್ಲೆಯಲ್ಲಿ ಮುದ್ದಹನುಮೇಗೌಡ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದ್ದು ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಮುಕ್ತವಾಗಿಸಿದ್ದಾರೆ. 500ಕ್ಕೂ ಹೆಚ್ಚು ಪ್ರಮುಖ ಮುಖಂಡರ ಸೇರ್ಪಡೆಯಿಂದ ಬಿಜೆಪಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವುದು ನಿಶ್ಚಯವಾಗಿದೆ. | ಬಿ.ಸುರೇಶ್‌ಗೌಡ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net