ಡಿಎಫ್ಎಲ್ಆರ್ ತಂತ್ರಜ್ಞಾನ ಕಂಡು ಬೆರಗಾದ ವಿದ್ಯಾರ್ಥಿಗಳು

8
Published on

ಮೈಸೂರು: ಕೊರೆಯುವ ಹಿಮದ ಚಳಿಯಲ್ಲಿ, ಸಾಗರದ ತಳದಲ್ಲಿ, ಆಮ್ಲಜನಕವೇ ಇಲ್ಲದ ಬಾನಂದಳದಲ್ಲಿಯೂ ಕ್ಷಣದಲ್ಲಿ ಆಹಾರ ತಯಾರಿಸುವ ತಂತ್ರಜ್ಞಾನ ಕಂಡು ವಿದ್ಯಾರ್ಥಿಗಳು ಮತ್ತಷ್ಟು ಕುತೂಹಲಿಗಳಾದರು.
ಸಿದ್ದಾರ್ಥ ಬಡಾವಣೆಯಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್)ನಿಂದ ಶನಿವಾರ ಆಯೋಜಿಸಿದ್ದ ಡಿಎಫ್‌ಆರ್‌ಎಲ್ ಸಂಶೋಧನಾ ಉತ್ಪನ್ನ ಪ್ರದರ್ಶನ ಹಾಗೂ ಸಾರ್ವಜನಿಕ ಮುಕ್ತ ಪ್ರವೇಶ ದಿನದಲ್ಲಿ ಸಂಶೋಧನೆಗಳನ್ನು ಕಂಡು ನೋಡುಗರ ಅಚ್ಚರಿಗೊಂಡರು.
ಸ್ವಾತಂತ್ರೃ ಸಂಭ್ರಮದ ಅಮೃತ ಮಹೋತ್ಸವ ಅಭಿಯಾನದ ಅಂಗವಾಗಿ ‘ಆತ್ಮ ನಿರ್ಭರ ಭಾರತದ ನಿರ್ಮಾಣದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆ ಬೆಳವಣಿಗೆ’ ವಿಷಯವಾಗಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ದೇಶದ ಸಶಸ್ತ್ರ ಪಡೆಗಳಿಗೆಂದು ತಯಾರಿಸಿದ ಆಹಾರ ಉತ್ಪನ್ನಗಳು, ಆಹಾರದ ತಯಾರಿ ಮತ್ತು ಸಂಗ್ರಹಕ್ಕೆ ಸಿದ್ಧಪಡಿಸಲಾದ ಯಂತ್ರ ಮತ್ತು ಸಾಧನಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಕುತೂಹಲದಿಂದ ನೋಡಿದರು.
ಕೊರೆಯುವ ಹಿಮಾಲಯ ಚಳಿಯ ಯುದ್ಧ ಭೂಮಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರ ಆಹಾರದ ಸುರಕ್ಷತೆಗಾಗಿ ನಿರ್ಮಿಸಲಾದ ಉಗ್ರಾಣ ಮಾಡ್ಯುಲರ್ ಸೈಲೊದ ಮಾದರಿ, ಭೂಸೇನೆಗೆಂದೇ ವಿಶೇಷ ಆಹಾರ, ವಾಯು ಸೇನೆ ಮತ್ತು ನೌಕಾ ಸೇನೆಗಾಗಿ ಇನ್ನೊಂದು ವಿಧಾನದಲ್ಲಿ ತಯಾರಿಸಲಾದ ಆಹಾರಗಳು, ಬಾಹ್ಯಾಕಾಶದಲ್ಲಿ ಬಳಸುವುದಕ್ಕಾಗಿಯೂ ಸಿದ್ಧಪಡಿಸಿದ ವಿವಿಧ ಬಗೆಯ ಆಹಾರ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.
ಮೊಸರು ತಯಾರಿಸುವ ಯಂತ್ರ, ಹಿಮದ ವಾತಾವರಣದಲ್ಲಿಯೂ ಆಹಾರವನ್ನು ಸಹಜ ತಾಪಮಾನದಲ್ಲಿ ಇರಿಸುವ ಹೆಪ್ಪುಗಟ್ಟಿಸದ ಕಂಟೈನರ್, ವಸ್ತುವಿನ ತಾಪಮಾನ ಕಡಿಮೆಯಾಗಲು ಬಿಡದ ಬ್ಯಾಗ್ ಜನರ ಗಮನಸೆಳೆದವು. ಹರ್ಡಲ್ ತಂತ್ರಜ್ಞಾನ ಬಳಸಿ ಆದಷ್ಟು ತೇವಾಂಶ ಉಳಿಯುವಂತೆ ಸಂರಕ್ಷಿಸಿದ ಹಣ್ಣಿನ ತೊಳೆಗಳು, ಎರಡು ವರ್ಷವಾದರೂ ಕೆಡದಂತೆ ಸಂಗ್ರಹಿಸಿದ ಕುಡಿಯುವ ನೀರಿನ ಪ್ಯಾಕೆಟ್‌ಗಳನ್ನು ಕಂಡು ವಿದ್ಯಾರ್ಥಿಗಳು ಅವಕ್ಕಾದರು.
ವಸ್ತು ಪ್ರದರ್ಶನ ಉದ್ಘಾಟಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ವಿಪಿನ್ ಕುಮಾರ್ ಕೌಶಿಕ್ ಮಾತನಾಡಿ, ಕಳೆದ 9 ವರ್ಷಗಳಿಂದ ಈ ವಸ್ತು ಪ್ರದರ್ಶನ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆ, ಸಾಧನೆಯನ್ನು ಪ್ರತಿ ಜುಲೈ 8ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ ಎಂದರು.
ಡಿಎಫ್ಆರ್‌ಎಲ್ ಸಂಶೋಧನೆಗಳು ದೇಶದ ರಕ್ಷಣಾ ವ್ಯವಸ್ಥೆಗೆ ಬಲ ನೀಡುತ್ತಿದ್ದು, ಸಂಸ್ಥೆಯೂ ಹಲವಾರು ಸಂಶೋಧನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯೊಂದಿಗೆ ದೇಶದ ಪ್ರಗತಿಗೆ ಕೊಡುಗೆ ನೀಡಲಿದೆ ಎಂದರು.
ಡಿಎಫ್‌ಆರ್‌ಎಲ್ ನಿರ್ದೇಶಕ ಡಾ.ಅನಿಲ್ ದತ್ ಸೆಮ್ವಾಲ್, ಡಿಆರ್‌ಡಿಒಒ ನಿರ್ದೇಶಕ (ಆಡಳಿತ) ವಿಪುಲ್ ಗುಪ್ತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net