

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ೬ ರಿಂದ ೧೪ ರವರೆಗೆ ಈ ಬಾರಿಯ ದತ್ತಮಾಲೆ ಹಾಗೂ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತಿç ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿ ಪ್ರತಿವರ್ಷವೂ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿAದ ದತ್ತ ಜಯಂತಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ಬಾರಿಯ ದತ್ತ ಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿAದ ನಡೆಸಲು ಸಂಘಟನೆಯು ತೀರ್ಮಾನಿಸಿದ್ದು ಸಾಧು ಸಂತರು ಮಾತೆಯರು, ದತ್ತ ಮಾಲಾಧಾರಿಗಳು ಮತ್ತು ದತ್ತ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವ ನಿರೀಕ್ಷೆ ಇದೆ. ದತ್ತಪೀಠದಲ್ಲಿ ಹೈಕೋರ್ಟ್ ನಿರ್ದೇಶನದ ಅನುಸಾರವಾಗಿ ಹೋಮ ಹವನ ಮತ್ತು ಪೂಜೆ ನಡೆಯಲಿದೆ ಎಂದು ಹೇಳಿದರು.
ಡಿಸೆಂಬರ್ ೧೨ರಂದು ಅನುಸೂಯದೇವಿ ಪೂಜೆ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಅಂದು ಬೆಳಗ್ಗೆ ೯.೩೦ಕ್ಕೆ ಮಾತೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ಈ ಯಾತ್ರೆ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹೊರಟು ಐ.ಜಿ. ರಸ್ತೆಯ ಮೂಲಕ ಶ್ರೀಕಾಮಧೇನು ದೇವಸ್ಥಾನವನ್ನು ತಲುಪಲಿದೆ. ಬಳಿಕ ದತ್ತಪೀಠಕ್ಕೆ ತೆರಳಲಿರುವ ಮಾತೆಯರು ದತ್ತಪೀಠದಲ್ಲಿ ನಡೆಯಲಿರುವ ಗಣಪತಿ ಹೋಮ, ಪುಣ್ಯಾಹ ವಾಚನ, ಪಂಚಗವ್ಯ ಶುದ್ದಿ, ಗಣಪತಿ ಹೋಮ, ನವ ಹೋಮ, ದುರ್ಗ ಹೋಮ, ಚಂಡಿಕಾ ಪಾರಾಯಣ ಕಲಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ. ಮಹಿಳೆಯರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ನಗರದಲ್ಲಿ ಡಿಸೆಂಬರ್ ೧೩ ರಂದು ಶೋಭಾ ಯಾತ್ರೆ ನಡೆಯಲಿದೆ. ಈ ಯಾತ್ರೆಯೂ ಅಂದು ಮಧ್ಯಾಹ್ನ ೨.೩೦ಕ್ಕೆ ಶ್ರೀಕಾಮಧೇನು ಗಣಪತಿ ದೇವಾಲಯದಿಂದ ಹೊರಟು ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ತಲುಪಲಿದೆ. ಸಂಜೆ ೬ ಗಂಟೆಗೆ ಇದೇ ಸ್ಥಳದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಿಸೆಂಬರ್ ೧೪ರಂದು ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿಯಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಉತ್ಸವದ ಅಂಗವಾಗಿ ಶುಕ್ರವಾರ ಚಿಕ್ಕಮಗಳೂರಿನಲ್ಲಿ ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿದೆ. ಈ ರ್ಯಾಲಿಯು ಬೆಳಗ್ಗೆ ನಗರದ ಶ್ರೀ ಕತ್ರಿ ಮಾರಮ್ಮ ದೇವಸ್ಥಾನದಿಂದ ಹೊರಟು ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆಯ ಮೂಲಕ ದತ್ತಪೀಠಕ್ಕೆ ತೆರಳಲಿದೆ ಎಂದು ಹೇಳಿದರು.
ದತ್ತಪೀಠ ಪ್ರವಾಸಿ ಕೇಂದ್ರವಲ್ಲ. ಅದು ತೀರ್ಥಕ್ಷೇತ್ರ, ಶ್ರದ್ಧಾ ಕೇಂದ್ರ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ. ನಮ್ಮ ಹೋರಾಟದ ಫಲವಾಗಿ ಈಗಾಗಲೇ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರನ್ನು ನೇಮಕ ಮಾಡಲಾಗಿದೆ. ಅಲ್ಲಿ ಪ್ರತಿನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೇಶ್‌ರಾಜ್ ಅರಸ್, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಹಾಸನ ವಿಭಾಗದ ಸಂಚಾಲಕ ಶಶಾಂಕ್, ಸಹ ಕಾರ್ಯದರ್ಶಿ ಆರ್.ಡಿ. ಮಹೇಂದ್ರ ಉಪಸ್ಥಿತರಿದ್ದರು.