ಡಿ.೧೭ ರಿಂದ ಅರಬೆತ್ತಲೆ ಪಾದಯಾತ್ರೆ

bkt-16-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಲರಾಮ ನಾಯಕ, ಮುಖಂಡರಾದ ಸುಭಾಸ ಶಿರಬೂರ, ನಜೀರ್ ಕಂಗನೊಳ್ಳಿ, ಗುಲಬಾ ಸಾಬ್, ಆನಂದ ಜಖಾತಿ, ಸುರೇಶ ಚಂದಕ ಇತರರು ಇದ್ದರು.
Published on

ಬಾಗಲಕೋಟೆ: ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಾಗಲಕೋಟೆ -ಕುಡಚಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಅರ ಬೆತ್ತಲೆ ಮೆರವಣಿಗೆ ಡಿ.೧೭ ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ಹೇಳಿದರು.
ಅಂದು ಬೆಳಗ್ಗೆ ೧೦ ಗಂಟೆಗೆ ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಿಂದ ಅರಬೆತ್ತಲೆ ಮೆರವಣಿಗೆ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ವ್ಯಾಪಾರಸ್ಥರು, ವಿವಿಧ ಮಠಾಧೀಶರು, ಚಿಂತಕರು, ರೈತರು ಭಾಗವಹಿಸಲಿದ್ದಾರೆ. ನಾನು ಕಡ್ಡಾಯವಾಗಿ ಅರೆ ಬೆತ್ತಲೆಯಾಗಿ ಪಾದಯಾತ್ರೆ ಮಾಡಲಿದ್ದೇನೆ. ಉಳಿದವರಿಗೆ ಕಡ್ಡಾಯವಲ್ಲ. ಆದರೇ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.೧೭ ರಂದು ಬಸವೇಶ್ವರ ವೃತ್ತದಿಂದ ಆರಂಭಗೊಳ್ಳುವ ಪಾದಯಾತ್ರೆಯು ಹಳೇ ನಗರ, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಖಾಂತರ ಸಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡ ನಂತರ ಪಾದಯಾತ್ರೆ ಸಾಗಲಿದೆ. ಡಿ.೧೮ ರಂದು ಕಲಾದಗಿ ಖಜ್ಜಿಡೋಣಿಯಿಂದ ರೈಲು ನಿಲ್ದಾಣಕ್ಕೆ ಪಾದ ಯಾತ್ರೆ ಸಾಗಿ ಮುಂದಿನ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರಕು-ಸಾಗಾಣಿಕೆ ವಹಿವಾಟು ಸ್ಥಗೀತಗೊಳಿಸಲಾಗುವುದು, ಡಿ.೧೯-೨೦ ರಂದು ಲೋಕಾಪುರ ಪಟ್ಟಣಕ್ಕೆ ತಲುಪಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು, ಡಿ.೨೧ ರಂದು ಮುಧೋಳ ನಗರಕ್ಕೆ ಪಾದಯಾತ್ರೆ ತಲುಪುವದು, ಡಿ.೨೨ ರಂದು ಜಮಖಂಡಿ, ಡಿ.೨೩ ರಂದು ರಬಕವಿ-ಬನಹಟ್ಟಿ, ಡಿ.೨೪ ರಂದು ತೇರದಾಳ, ಡಿ.೨೫ ರಂದು ಹಾರೂಗೇರಿ, ಡಿ.೨೬ ರಂದು ಕುಡಚಿ ರೈಲು ನಿಲ್ದಾಣ ತಲುಪಿ ಪ್ರತಿಭಟನೆ ನಡೆಸಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಪಾದಯಾತ್ರೆಯ ಮಾಹಿತಿ ನೀಡಿದರು.
ಯೋಜನಾ ವೆಚ್ಚ ಡಬಲ್ ಆಗಿದೆ:
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಗತಿಸಬೇಕಿತ್ತು. ಆದರೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಎಲ್ಲ ಪಕ್ಷಗಳ ಸರ್ಕಾರಗಳು ನಿರ್ಲಕ್ಷ್ಯ ಧೋರಣೆಯಿಂದ ಖಜ್ಜಿಡೋಣಿಗೆ ಬಂದು ತಲುಪಿದೆ. ಆದರೇ ರೈಲುಗಳು ಓಡಾಡುತ್ತಿಲ್ಲ. ಕೆಲವು ತಿಂಗಳು ಹಿಂದೆ ಅಷ್ಟೇ ಗೂಡ್ಸ್ ರೈಲುಗಳು ಸಂಚಾರ ಆರಂಭಿಸಿವೆ. ಈ ಮೊದಲು ಯೋಜನಾ ವೆಚ್ಚ ೮೧೬ ಕೋಟಿ ರೂ. ಇತ್ತು. ಇದೀಗ ಅಂದಾಜು ೪ ಸಾವಿರ ಕೋಟಿ ರೂ. ದಾಟಿದೆ. ನಮ್ಮ ಜಿಲ್ಲೆಯ ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆ ಕಾರಣ. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಜನ ಸಾಮಾನ್ಯರಿಗೆ ಅನುಕೂಲ ಇರುವ ರೈಲು ಮಾರ್ಗ ಬದಲು ವಿಮಾನ ನಿಲ್ದಾಣ ಮಾಡಲು ಹೊರಟಿರುವುದು ದುರಂತ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಲರಾಮ ನಾಯಕ, ಮುಖಂಡರಾದ ಸುಭಾಸ ಶಿರಬೂರ, ನಜೀರ್ ಕಂಗನೊಳ್ಳಿ, ಗುಲಬಾ ಸಾಬ್, ಆನಂದ ಜಖಾತಿ, ಸುರೇಶ ಚಂದಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net