

ಮೈಸೂರು: 2022ನೇ ಸಾಲಿನ ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿಗೆ ಚಿತ್ರಕಲಾವಿದ ಪ್ರಕಾಶ ಗಡಕರ ಅವರು ಆಯ್ಕೆಯಾಗಿದ್ದಾರೆ
.
ನಾಡಿನ ಹೆಸರಾಂತ ಕಲಾವಿದರಾದ ಕಲಾಗುರು ಡಿ.ವಿ.ಹಾಲಭಾವಿ ಅವರ ಹೆಸರಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಧಾರವಾಡದ ಬೆಲ್ಲದ ಶಿಕ್ಷಣ ಮತ್ತು ಕೃಷಿ ಪ್ರತಿಷ್ಠಾನ ಸಹಯೋಗದೊಂದಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಕಾಶ ಗಡಕರ ಅವರು ದಿ.ಹುಸನಯ್ಯ ಮತ್ತು ಗಂಗೂಬಾಯಿ ಅವರ ಪುತ್ರರು. 1962ರಂದು ಜನಿಸಿದರು. ಬಾಲ್ಯದಿಂದಲೂ ಕಲೆಯ ಬಗ್ಗೆ ಆಸಕ್ತಿಯುಳ್ಳ ಇವರು ತಮ್ಮದೇ ಶಿಷ್ಯವೃಂದವನ್ನು ಹುಟ್ಟುಹಾಕಿ ಸ್ವತಃ ಕಲಾವಿದರಾಗಿ ಬೆಳೆದರು. ಜತೆಗೆ, ನಾಡಿನ ಹಲವಾರು ಕಲಾವಿದರನ್ನೂ ಬೆಳೆಸಿದರು. ಇವರು ಕಲಬುರಗಿಯ ದಿ ಐಡಿಯಲ್ ಫೈನ್ ಆರ್ಟ್ ಇನ್ಸ್‌ಟಿಟ್ಯೂಟ್, ಕಾಲೇಜ್ ಆಫ್ ವಿಶ್ಯೂಯಲ್ ಆರ್ಟ್ಸ್‌ನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.
ಕಲಬುರಗಿ, ಧಾರವಾಡ, ಮೈಸೂರು, ಬೆಂಗಳೂರು, ಮುಂಬೈ, ಚಂಡೀಗಡ, ಪುದುಚೇರಿ, ಮದ್ರಾಸ್, ದೆಹಲಿ ಮುಂತಾದೆಡೆ ಕಲಾ ಪ್ರದರ್ಶನ ನೀಡಿದ್ದಾರೆ. ರಾಜ್ಯಾದ್ಯಂತ ಹಲವಾರು ಕಡೆ ಏಕವ್ಯಕ್ತಿ ಕಲಾ ಪ್ರದರ್ಶನ, ಗುಂಪು ಕಲಾ ಪ್ರದರ್ಶನ ನಡೆಸಿದ್ದಾರೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಇವರ ಕಲಾಸೇವೆಯನ್ನು ಗುರುತಿಸಿ, 2022ನೇ ಸಾಲಿನ ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಸ್ವಸ್ತಿವಾಚನ, ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.