ಡಿ.ಬಿ.ಕುಪ್ಪೆ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ

17
Published on

ಮೈಸೂರು: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಾಕ್ ಶ್ರವಣ ಸಂಸ್ಥೆಯಿಂದ ಎಚ್.ಡಿ.ಕೋಟೆ ತಾಲೂಕು ಡಿ.ಬಿ.ಕುಪ್ಪೆಯ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
ಅಸಾಧಾರಣ ಹಾಗೂ ಸಾಮಾನ್ಯ ಶಾಲಾ ಮಕ್ಕಳ ತಪಾಸಣೆಯಲ್ಲಿ ದಂತಚಿಕಿತ್ಸೆ, ಕಿವಿ, ಮೂಗು, ಗಂಟಲು, ನೇತ್ರ ತಪಾಸಣೆ, ರಕ್ತ ಪರೀಕ್ಷೆ, ವಾಕ್ ಮತ್ತು ಶ್ರವಣ ಪರೀಕ್ಷೆ, ಮಕ್ಕಳಲ್ಲಿರುವ ಪೌಷ್ಟಿಕಾಂಶದ ಕೊರತೆ ಇರುವ 180 ವಿದ್ಯಾರ್ಥಿಗಳಿಗೆ 30 ಜನರ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧ ವಿತರಿಸಲಾಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಲ್.ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಇದು 3ನೇ ಆರೋಗ್ಯ ತಪಾಸಣಾ ಶಿಬಿರವಾಗಿದೆ. ಈ ಹಿಂದೆ ಹುಣಸೂರು ತಾಲೂಕು ನೆಲ್ಲೂರುಪಾಲ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ನಡೆಸಿದಾಗ 48 ಮಕ್ಕಳಿಗೆ ರಕ್ತಹೀನತೆ ಕಂಡುಬಂದಿದೆ. 3 ಮಕ್ಕಳಿಗೆ ಚರ್ಮ ಸಂಬಂಧಿ ಕಾಯಿಲೆ ಇದೆ. 5 ಮಕ್ಕಳಿಗೆ ಅನ್ನಾಂಗದ ಕೊರತೆ, 5 ಮಕ್ಕಳಿಗೆ ಹೃದಯದಲ್ಲಿ ತೊಂದರೆ ಕಂಡುಬಂದಿದ್ದು, ಈ ಎಲ್ಲ ಮಕ್ಕಳಿಗೆ ಸಂಬಂಧಪಟ್ಟ ವೈದ್ಯರ ಬಳಿ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಿದರು.
ಡಿ.ಬಿ.ಕುಪ್ಪೆ ಸುತ್ತಮುತ್ತ ಯಾವುದೇ ಆಸ್ಪತ್ರೆಗಳಿಲ್ಲ. ಇದು ಕರ್ನಾಟಕದ ಕೊನೆಯ ಗ್ರಾಮವಾಗಿರುವುದರಿಂದ ನಾವು ಮುಂದಿನ ದಿನಗಳಲ್ಲಿ ಹಾಡಿ ಜನರಿಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತೇವೆ. ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಆಶ್ರಮ ಶಾಲೆಗಳಲ್ಲಿಯೂ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್.ಪ್ರಭಾಅರಸ್, ತಾಲೂಕು ಕಲ್ಯಾಣಾಧಿಕಾರಿಗಳಾದ ಎಂ.ನಾರಾಯಣಸ್ವಾಮಿ, ಎಚ್.ಸಿ.ಬಸವರಾಜು, ಅರುಣ್‌ಪ್ರಭು, ಮುಖ್ಯಶಿಕ್ಷಕ ಅಶೋಕ್, ಸಮುದಾಯ ಆರೋಗ್ಯಾಧಿಕಾರಿ ಡಾ. ರವೀಶ್, ಬಿಗಣಿ, ಜೆಎಸ್‌ಎಸ್ ಆಸ್ಪತ್ರೆಯ ವೈದ್ಯರಾದ ಡಾ. ಇಂದಿರಾ, ಡಾ.ಸುಷ್ಮಾ, ಡಾ.ಪ್ರಶಾಂತ್, ಡಾ.ಚೇತನ್, ಡಾ.ಸುನೀತಾಸಿಂಗ್, ಡಾ.ಮಹಾದೇವಪ್ಪ, ಡಾ.ಮೌರ್ಯ, ಡಾ.ಸಾರಾನ್ಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net