ಡಿ ಗ್ರೂಪ್ ಹುದ್ದೆ ಭರ್ತಿಗೆ ಹೋರಾಟ ಅನಿವಾರ್ಯ

24 TTH 01 (1)
ಸುವರ್ಣ ಸಹಕಾರ ಭವನದಲ್ಲಿ ನಡೆದ ಡಿ ಗ್ರೂಪ್ ನೌಕರರ ಒಕ್ಕೂಟದ ಸಭೆಯಲ್ಲಿ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಸ್.ನಾಗೇಂದ್ರ ಹಾಗೂ ಅವರ ತಾಯಿ ಸರೋಜಮ್ಮ ಅವರನ್ನು ಸನ್ಮಾನಿಸಲಾಯಿತು. ಗಣೇಶನ್, ವೆಂಕಟೇಶವಾರು, ಎಸ್.ಮತ್ತುರಾಂ, ಪಿ.ಮುನಿಯಪ್ಪನ್ ಇತರರಿದ್ದರು.
Published on

ತೀರ್ಥಹಳ್ಳಿ: ಖಾಲಿ ಇರುವ ಡಿ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಜನರಲ್ ಸೆಕ್ರೆಟರಿಯೇಟ್‌ನಿಂದ ಮೊದಲ್ಗೊಂಡು ಸರ್ಕಾರದ ಎಲ್ಲ ಹಂತದ ಇಲಾಖೆಗಳಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು ಒಗ್ಗೂಡಿ ಹೋರಾಟಕ್ಕಿಳಿಯುವ ಅನಿವಾರ್ಯತೆ ಇದೆ ಎಂದು ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರಾಧ್ಯಕ್ಷ ಗಣೇಶನ್ ಹೇಳಿದರು.

ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ಪದಾಕಾರಿಗಳ, ಡಿ ಗ್ರೂಪ್ ನೌಕರರ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿಸರು.

ತಮಿಳುನಾಡಿನ ಡಿ ಗ್ರೂಪ್ ನೌಕರರ ಅಧ್ಯಕ್ಷರ ಪ್ರಯತ್ನದಿಂದ ಚೆನ್ನೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ ಫಲವಾಗಿ 31 ಸಾವಿರ ಡಿ ಗ್ರೂಪ್ ಹುದ್ದೆಗಳನ್ನು ಮಂಜೂರು ಮಾಡಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ನೌಕರರಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಡಿ ಗ್ರೂಪ್ ನೌಕರರಿಗೆ ಸಮನಾದ ವೇತನ, ವೈದ್ಯಕೀಯ ಭತ್ಯೆ ಸೇರಿ ಎಲ್ಲ ಸವಲತ್ತುಗಳು ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಹಳೇ ಪಿಂಚಣಿ ನೀತಿ ಮುಂದುವರಿಸಬೇಕು. ಈ ಬಗ್ಗೆ ಅ.10ರಂದು ಚೆನ್ನೆನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಸ್.ನಾಗೇಂದ್ರ, ಗ್ರಾಪಂನಿಂದ ರಾಷ್ಟ್ರಪತಿ ಭವನದವರೆಗೆ ಡಿ ಗ್ರೂಪ್ ನೌಕರರ ಸೇವೆ ಅಗತ್ಯವಿದೆ. ಆದರೆ ಸರ್ಕಾರಗಳು ಈ ನೌಕರರ ಬಗ್ಗೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಕಾಯಂ ನೌಕರರ ನಾಲ್ಕು ಪಟ್ಟು ಕೆಲಸ ತೆಗೆದುಕೊಳ್ಳುವ ದಿನಗೂಲಿ ನೌಕರರ ಕಾರ್ಯಕ್ಷಮತೆ ಬಗ್ಗೆ ಅರಿವಿದ್ದರೂ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ದೂರಿದರು.

ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಆಂಧ್ರಪ್ರದೇಶದ ವೆಂಕಟೇಶವಾರು, ತಮಿಳುನಾಡಿನ ಎಸ್.ಮತ್ತುರಾಂ, ಪಿ.ಮುನಿಯಪ್ಪನ್, ಬಿ.ಎಂ.ನಟರಾಜ್, ಸರೋಜಮ್ಮ ಇದ್ದರು. ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಯಿತು.

ಮಾಸಿಕ ಕಮಿಷನ್ ಪಡೆಯುವ ಖಾಸಗಿ ಸಂಸ್ಥೆಗಳ ಮೂಲಕ ಮಾಡುವ ನೇಮಕಾತಿ ರದ್ದುಗೊಳಿಸಬೇಕು. ಗ್ರಾಪಂ, ಪಪಂ ಮತ್ತು ಪುರಸಭೆಗಳಲ್ಲಿ ಕೆಲಸ ಮಾಡುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಶಿಕ್ಷಣ ಪಡೆದ ನೌಕರರನ್ನು ಹಿರಿತನದ ಆಧಾರದಲ್ಲಿ ಭಡ್ತಿ ನೀಡಬೇಕು. ರಾತ್ರಿ ಕಾವಲುಗಾರರು ಮತ್ತು ಕ್ಲೀನರ್ ಹುದ್ದೆಗಳಿಗೂ ಡಿ ವರ್ಗದ ನೌಕರರನ್ನು ಭರ್ತಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು.

ಗಣೇಶನ್, ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net