

ಬೀದರ್: ತಾಲೂಕಿನ ಜನವಾಡ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ನೆಸ್ಸೆಸ್ಕೆ) ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಖಾನೆ ನಾಗಮಾರಪಳ್ಳಿ ಕೈಯಲ್ಲಿತ್ತು. 2000ದಿಂದ 2015ರವರೆಗೆ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅಧ್ಯಕ್ಷರಿದ್ದರು. ಅವರ ಅಗಲಿಕೆ ನಂತರ ಅವರ ಪುತ್ರ ಉಮಾಕಾಂತ ನಾಗಮಾರಪಳ್ಳಿ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಸಹಕಾರ ಕ್ಷೇತ್ರದಲ್ಲಿ ಜರುಗಿದ ದಿಢೀರ್ ಬೆಳವಣಿಗೆಯಿಂದ ಡಿಕೆ ಅವರಿಗೆ ಅಧ್ಯಕ್ಷ ಪಟ್ಟ ಒಲದಿದೆ.
ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಉಮಾಕಾಂತ ನಾಗಮಾರಪಳ್ಳಿ, ಡಿಕೆ ಸಿದ್ರಾಮ ಸೇರಿದಂತೆ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರು. ಗುರುವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಡಿಕೆ ಸಿದ್ರಾಮ ಅವಿರೋಧವಾಗಿ ಆಯ್ಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಸ್ವತಃ ಉಮಾಕಾಂತ ನಾಗಮಾರಪಳ್ಳಿ ಅವರೇ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಸಿದ್ರಾಮ ಅವರ ಹೆಸರು ಪ್ರಸ್ತಾಪಿಸಿರುವುದು ಜಿಲ್ಲೆಯ ಸಹಕಾರ ಹಾಗೂ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆ, ವಿಭಿನ್ನ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಡಿಕೆ ಸಿದ್ರಾಮ ಅವರು ಅಧ್ಯಕ್ಷರಾಗುವ ಮೂಲಕ ಮೊದಲ ಸಲ ಕಾರ್ಖಾನೆ ಸಾರಥ್ಯ ನಾಗಮಾರಪಳ್ಳಿ ಕುಟುಂಬದ ಬದಲು ಬೇರೆಯವರ ಕೈಗೆ ಹೋಗಿದೆ. ಕಾರ್ಖಾನೆ ಉಪಾಧ್ಯಕ್ಷರಾಗಿ ಇದೇ ವೇಳೆ ಬಾಲಾಜಿ ಚವ್ಹಾಣ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಕೆ ಸಿದ್ರಾಮ ಭಾಲ್ಕಿ ತಾಲೂಕಿನ ಕೇಸರಜವಳಗಾದವರು. 2013ರಲ್ಲಿ ಭಾಲ್ಕಿ ವಿಧಾನಸಭೆ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ, 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ರಾಜಕೀಯ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಸಿದ್ರಾಮ ಜಿಲ್ಲೆಯ ಚತುರ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇವರು ಕಾರ್ಖಾನೆ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದು ಭಾರಿ ಚರ್ಚೆಗೆ ನಾಂದಿ ಹಾಡಿದೆ. ಇವರ ಅಧ್ಯಕ್ಷರಾಯ್ಕೆ ಹಿಂದಿನ ಬೆಳವಣಿಗೆ ಏನಿರಬಹುದು ಎಂಬುದು ವ್ಯಾಪಕ ಕುತೂಹಲಕ್ಕೂ ಕಾರಣವಾಗಿದೆ.