ಡಿ.ಕೆ. ಶಿವಕುಮಾರ್‌ಗೆ ಇಲ್ಲದ ಮುಜುಗರ ನಮಗೇಕೆ : ಕೆ.ಎಸ್. ಈಶ್ವರಪ್ಪ ಪ್ರಶ್ನೆ

KS Eshwarappa
Published on

ಮೈಸೂರು: ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿಯಿಂದ ಬಿಜೆಪಿಗೆ ಯಾವುದೇ ರೀತಿಯ ಮುಜುಗರ ಉಂಟಾಗಿಲ್ಲ, ಸಾವಿರಾರು ಕೋಟಿ ರೂ. ಲೂಟಿ ಮಾಡಿ ಸಿಕ್ಕಿಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಇಲ್ಲದ ಮುಜುಗರ ನಮಗೇಕೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.

ತಿಹಾರ್ ಜೈಲಿಗೆ ಹೋಗಿ ಬಂದ ಡಿ.ಕೆ. ಶಿವಕುಮಾರ್ ಸಹ ಲೋಕಾಯುಕ್ತ ದಾಳಿಯ ಕುರಿತು ಮಾತನಾಡುತ್ತಿದ್ದಾರೆ. ಶಿವಕುಮಾರ್ ಮನೆಯಲ್ಲಿ ಎಷ್ಟು ಕಂತೆ ನೋಟು ಇತ್ತು? ಎಷ್ಟು ಅಕ್ರಮ ದಾಖಲೆ ಇತ್ತು ಎಂಬುದನ್ನು ರಾಜ್ಯದ ಜನರು ನೋಡಿದ್ದಾರೆ. ಇಂದಿಗೂ ಶಿವಕುಮಾರ್ ಬೇಲ್‌ನಲ್ಲಿದ್ದು, ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಪ್ರಶಾಂತ್ ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗಲಿ. ಯಾರೇ ತಪ್ಪು ಮಾಡಿದರೂ ತಪ್ಪೇ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಲೋಕಾಯುಕ್ತ ದಾಳಿ ಕುರಿತು ಮಾಧ್ಯಮದಲ್ಲಿ ಬಂದಿರುವ ಮಾಹಿತಿ ಮಾತ್ರ ನಮಗೆ ತಿಳಿದಿದ್ದು, ದಾಳಿಯ ಪೂರ್ಣ ಮಾಹಿತಿ ಇಲ್ಲ. ಹಾಗಾಗಿ ದಾಳಿಯ ಕುರಿತು ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದರು.

ಬಿಜೆಪಿಯವರ ಅಕ್ರಮಗಳ ಕುರಿತು ತನಿಖೆ ನಡೆಸಿದರೆ 10 ರಿಂದ 15 ಪರಪ್ಪನ ಅಗ್ರಹಾರ ಸಾಲದು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಕುಮಾರಸ್ವಾಮಿ ಕುಟುಂಬದವರ ಅಕ್ರಮದ ಕುರಿತು ತನಿಖೆ ನಡೆಸಿದರೆ 50 ಜೈಲುಗಳು ಸಾಲುವುದಿಲ್ಲ, ಅವರ ಕುಟುಂಬದ ಎಲ್ಲರು ಜೈಲಿಗೆ ಹೋಗುತ್ತಾರೆ. ಮಾಜಿ ಮುಖ್ಯಮಂತ್ರಿ ಈ ರೀತಿ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಆರ್ಕಾವತಿ ಡಿ ನೋಟಿಫಿಕೇಷನ್‌ನಲ್ಲಿ 8 ಸಾವಿರ ಕೋಟಿ ರೂ. ಹಗರಣ ನಡೆದಿದ್ದು, ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ನೀಡಿದ ವರದಿಯಲ್ಲಿ ಅಕ್ರಮ ಬಯಲಾಗಿದೆ. ನನಗೆ ನೂರಕ್ಕೆ ನೂರು ನಂಬಿಕೆ ಇದ್ದು, ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net