ಡಿ. 7ರಂದು ಚಿತ್ರದುರ್ಗದಲ್ಲಿ 1008 ರೈತ ಕುಟುಂಬಗಳ ಕಲ್ಯಾಣೋತ್ಸವ

ctd-00003
Published on

ಚಿತ್ರದುರ್ಗ: ಮದುವೆಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಆಶಯದೊಂದಿಗೆ ರಾಜ್ಯ ರೈತೋದಯ ಹಸಿರು ಸೇನೆಯು ಡಿ.7 ರಂದು ಚಿತ್ರದುರ್ಗದಲ್ಲಿ 1008 ರೈತ ಕಟುಂಬದ ಉಚಿತ ಸಾಮೂಹಿಕ ವಿವಾಹ ಸಮಾವೇಶ ಆಯೋಜಿಸಿದೆ.

ಚಿತ್ರದುರ್ಗ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠ ಪಕ್ಕದ ಜಾಕೀರ ಹುಸೇನ ಬಡಗಿ ನಿವೇಶನದಲ್ಲಿ ಕಲ್ಯಾಣೋತ್ಸವ ಆಯೋಜಿಸಿದ್ದು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಸಿರು ಸೇನೆ ಸಂಸ್ಥಾಪಕ ಅಧ್ಯಕ್ಷ ಬಿ.ಟಿ. ಚಂದ್ರಶೇಖರ್ ತಿಳಿಸಿದರು.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ ಜಗದ್ಗುರು ಶಂಕರಚಾರ್ಯ ಭಾರತಿ ತೀರ್ಥ ಶ್ರೀಗಳ ಆಶೀರ್ವಾದದೊಂದಿಗೆ, ಜಗದ್ಗುರು ಶಂಕರಚಾರ್ಯ ವಿಧುಶೇಖರ ಭಾರತಿ ಶ್ರೀಗಳ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ ಎಂದು ವಿವರ ನೀಡಿದರು.

ಅಂದಾಜು 12 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಹಲವು ದಾನಿಗಳು ನೆರವು ನೀಡಲು ಮುಂದೆ ಬಂದಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆ ಅವರು 1008 ತಾಳಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಈಗ 6-7 ಕೋಟಿ ರೂ.ಗಳಷ್ಟು ನೆರವು ಸಿಕ್ಕಿದೆ. ಇನ್ನು 5 ಕೋಟಿ ರೂ. ಬೇಕಿದೆ. ದಾನಿಗಳು ಮುಂದೆ ಬರುವಂತೆ ಮನವಿ ಮಾಡಿದರು. ಇಲ್ಲಿ ವಿವಾಹವಾಗುವ ವಧು-ವರರಿಗೆ ಪಾತ್ರೆ, ಪಡಗ, ಬಟ್ಟೆ ನೀಡಲಾಗುವುದು. ನೂತನ ದಂಪತಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ 900 ಅರ್ಜಿ ಬಂದಿವೆ. ನಿಗದಿತ ವಯಸ್ಸು ಮತ್ತಿತರ ಅಂಶಗಳನ್ನು ಆಧರಿಸಿ ಅರ್ಹರಿಗೆ ವಿವಾಹಕ್ಕೆ ಅವಕಾಶ ನೀಡಲಾಗುವುದು. ಅಪ್ರಾಪ್ತರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿವಾಹಕ್ಕೆ ಗಂಡು-ಹೆಣ್ಣು ಹೆಸರು ನಮೂದಿಸಲು ಮನವಿ ಮಾಡಿದರು.

ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಜಾಕೀರ ಹುಸೇನ್ ಮಾತನಾಡಿ,ರೈತರ ಮಕ್ಕಳಿಗೆ ಹೆಣ್ಣು ಸಿಗುವುದು ಕಷ್ಟ. ಇಂತಹ ಸಮಯಲ್ಲಿ 1008 ರೈತರ ಕಲ್ಯಾಣೋತ್ಸವ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಪ್ರಶಂಸಿಸಿದರು.

ರಾಜ್ಯ ರೈತೋದಯ ಹಸಿರು ಸೇನೆ ಮಹಿಳಾ ಘಟಕದ ಅಧ್ಯಕ್ಷೆ ದೇವಮ್ಮ, ಮೈಸೂರು ರಮಾ ನಂದ್, ನ್ಯಾಯವಾದಿ ತೇಜಸ್ವಿ, ಗೋವಿಂದರಾಜ್ ಕೆ.ಆರ್.ಪೇಟೆ, ರಾಜ್ಯ ಸಂಚಾಲಕ ಸಿದ್ದೇಶ್, ಜ್ಯೋತಿ ಪ್ರದೀಪ್, ರಮೇಶ್, ತೇಜು, ಭೂಮಿಕಾ ದೇಶಪಾಂಡೆ, ಲತಾ, ಕೃಷ್ಣಮೂರ್ತಿ, ಮಂಜುಳಾ, ಅಶೋಕ್, ಮಾರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net