ಡಿ.2ರವರೆಗೂ ಮಹಿಳಾ ಸುರಕ್ಷತೆ ರಾಷ್ಟ್ರೀಯ ಅಭಿಯಾನ

ಡಿ.2ರವರೆಗೂ ಮಹಿಳಾ ಸುರಕ್ಷತೆ ರಾಷ್ಟ್ರೀಯ ಅಭಿಯಾನ
Published on

ಹಾಸನ: ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಷ್ಟ್ರೀಯ ಸಮಿತಿಯು ಮಹಿಳಾ ಸುರಕ್ಷತೆ, ಸಾಮೂಹಿಕ ಜವಾಬ್ದಾರಿ ಎಂಬ ಘೋಷವಾಕ್ಯದಡಿ ದೇಶಾದ್ಯಂತ ಅ2ರಂದು ಆರಂಭಿಸಿರುವ ರಾಷ್ಟ್ರೀಯ ಅಭಿಯಾನ ಡಿ.2 ರವರೆಗೆ ನಡೆಯಲಿದೆ ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಷ್ಟ್ರೀಯ ಸಮಿತಿ ಜಿಲ್ಲಾಧ್ಯಕ್ಷೆ ಅಫ್ರೋಜ ಬಾನು ತಿಳಿಸಿದರು.
ಸಮಾನ ಮಾನಸಿಕ ಸಾಮರ್ಥ್ಯಗಳನ್ನು ಹೊಂದಿರುವ ಮಹಿಳೆಯರು ಪುರುಷರ ಒಡನಾಡಿಗಳಾಗಿದ್ದಾರೆ ಎಂದು ಹೇಳಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜನ್ಮ ದಿನಾಚರಣೆಯಂದು ಈ ಅಭಿಯಾನಕ್ಕೆ ಮುನ್ನುಡಿ ಬರೆಯಲಾಗಿದೆ. ಮಹಿಳಾ ಪರ ಗಾಂಧಿ ತತ್ವಗಳನ್ನು ಸಾಕಾರಗೊಳಿಸುವ ಪ್ರಯತ್ನದ ಭಾಗವಾಗಿದೆ. ಸಾಮಾಜಿಕ ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಗೆ ತ್ವರಿತ ನ್ಯಾಯ, ಸುರಕ್ಷತೆಯನ್ನು ಒದಗಿಸುವಲ್ಲಿ ಸಾಮಾಜದ ಜವಾಬ್ದಾರಿಯನ್ನು ತಿಳಿಯಪಡಿಸುವುದೇ ಅಭಿಯಾನದ ಬಹುಮುಖ್ಯ ಉದ್ದೇಶ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನ್ಯಾಯದ ಬಂಧನ, ವಿಳಂಬವಾಗುತ್ತಿರುವ ವಿಚಾರಣಾ ಪ್ರಕ್ರಿಯೆ ಹಾಗೂ ಕಾನೂನುಗಳ ದುರ್ಬಳಕೆಗಳಿಂದ ವರ್ಷಗಳು ಕಳೆದರೂ ಕೈದಿಗಳಾಗಿ ಸೆರೆವಾಸದಲ್ಲಿರುವ ಸಾಮಾಜಿಕ ಹೋರಾಟಗಾರ್ತಿಯರ ತ್ವರಿತ ನ್ಯಾಯ ವ್ಯವಸ್ಥೆಯ ಮೂಲಕ ಬಿಡುಗಡೆಗೆ ಸರ್ಕಾರ ಬದ್ಧವಾಗಬೇಕು. ವಿಚಾರಣಾ ಅವಧಿಗಳಲ್ಲಿ ಲಿಂಗ ಸೂಕ್ಷ್ಮತೆಯನ್ನು ಆಧರಿಸಿ ಮಹಿಳಾ ಅಧಿಕಾರಿಗಳನ್ನು ನೇಮಿಸಬೇಕು. ಗುಂಪು ಹತ್ಯೆಗಳಂತಹ ಅಮಾನುಷ, ಅನ್ಯಾಯದ ಕ್ರೌರ್ಯಕ್ಕೆ ಬಲಿಯಾದವರ ಮಹಿಳೆಯರು ಮತ್ತು ಮಕ್ಕಳಿಗೆ ಆರ್ಥಿಕ ಪರಿಹಾರವನ್ನು ಒದಗಿಸಿ, ಭದ್ರತೆಯನ್ನು ಖಾತರಿ ಪಡಿಸಬೇಕು. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಸನ್ನಿವೇಶಗಳು ನಿರ್ಮಾಣವಾಗುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ವಿಧವೆಯರಿಗೆ ರಾಜ್ಯ ಅನುದಾನಿತ ಪುನರ್ವಸತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿಯಾನದ ಅಂಗವಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ವಿವಿಧ ಗೋಷ್ಠಿಗಳನ್ನು ನಡೆಸುವುದು, ಭಿತ್ತಿಪತ್ರ ಅಂಟಿಸುವುದು, ಸಾಮಾಜಿಕ ಕಾರ್ಯಕರ್ತೆಯರ ಭೇಟಿ, ಕರಪತ್ರಗಳ ವಿತರಣೆ, ಪ್ರತಿಭಟನೆ, ಬೀದಿನಾಟಕ, ಕ್ಯಾಂಡಲ್ ಮಾರ್ಚ್ ಮುಂತಾದ ಜನಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇರ ಭಾನು, ರಾಜ್ಯ ಸಮಿತಿ ಸದಸ್ಯೆ ರೂಬಿ ವಾಹೀದ್, ನಾಜೀರ್, ಸೂಫಿಯಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net