ಡಿ.22, 23 ರಂದು ಸರ್ಕಾರಿ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ

20 krp01
Published on

ಕೆ.ಆರ್.ಪೇಟೆ: ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಡಿ.22 ಮತ್ತು 23 ರಂದು ಎರಡು ದಿನಗಳ ಕಾಲ ನ್ಯಾಕ್ ಸಮಿತಿ ಭೇಟಿ ನೀಡಲಿದ್ದು, ನ್ಯಾಕ್ ಸಮಿತಿಯ ಸ್ವಾಗತಕ್ಕೆ ಕಾಲೇಜಿನ ಸಿಬ್ಬಂದಿ ವರ್ಗ ಪ್ರಾಂಶುಪಾಲ ಟಿ.ಎಂ.ದೇವರಾಜು ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.


2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಲೇಜಿನ ನೂತನ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ಕಾಲೇಜಿನಲ್ಲಿ ಒಟ್ಟು 625 ವಿದ್ಯಾರ್ಥಿನಿಯರು ಕಲಿಯುತ್ತಿದ್ದು, 35 ಲಕ್ಷ ರೂ. ವೆಚ್ಚದಲ್ಲಿ ಎರಡು ಸುಸಜ್ಜಿತ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳು, 30 ಲಕ್ಷ ರೂ.ವೆಚ್ಚದಲ್ಲಿ ಲ್ಯಾಬ್ ಸೌಲಭ್ಯ ಕಲ್ಪಿಸಲಾಗಿದೆ. ಕಂಪ್ಯೂಟರ್ ಲ್ಯಾಬ್, ಭೂಗೋಳಶಾಸ್ತ್ರ ವಿಭಾಗದ ಲ್ಯಾಬ್, ಮನಶಾಸ್ತ್ರ ವಿಭಾಗದ ಲ್ಯಾಬ್, ಒಳಾಂಗಣ ಕ್ರೀಡಾಂಗಣಗಳನ್ನು ವಿದ್ಯಾರ್ಥಿನಿಯರ ಕಲಿಕಾ ಪ್ರಗತಿಗೆ ಪೂರಕವಾಗಿ ನಿರ್ಮಿಸಲಾಗಿದೆ.


ಕಾಲೇಜು ಆವರಣದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ಸುಸಜ್ಜಿತ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಿರಂತರ ವಿದ್ಯುತ್ ಸರಬರಾಜಿಗಾಗಿ ಯುಪಿಎಸ್ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನಲ್ಲಿ 18 ಕಾಯಂ ಉಪನ್ಯಾಸಕರು, 17 ಅತಿಥಿ ಉಪನ್ಯಾಸಕರು, 4 ಜನ ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಮೂಲಕ 5 ಜನ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಾಲೇಜಿಗೆ ನ್ಯಾಕ್ ಸಮಿತಿಯ ಮೂಲಕ ಎ ಗ್ರೇಡ್ ಪಡೆಯುವ ವಿಶ್ವಾಸವನ್ನು ಪ್ರಾಂಶುಪಾಲ ವ್ಯಕ್ತಪಡಿಸಿದ್ದಾರೆ.


ಉತ್ತರ ಪ್ರದೇಶದ ಆಗ್ರಾ ವಿಶ್ವವಿದ್ಯಾಲಯದ ಕುಲಪತಿ ಆಶುರಾಣಿ, ಛತ್ತೀಸ್‌ಗಡದ ರಾಯಪುರ ವಿ.ವಿ.ಯ ಪ್ರೊ.ಪ್ರಿಯಂವದಾ ಶ್ರೀವತ್ಸವ ಹಾಗೂ ಮುಂಬೈನ ಕಾರ್ಡಿಫ್ ಮೆಟ್ ಯೂನಿವರ್ಸಲ್ ಬಿಸಿನೆಸ್ ಸ್ಕೂಲ್‌ನ ಉಪ ನಿರ್ದೇಶಕಿ ವಾಹಿದಾ ಸನ್ನಿ ಥಾಮಸ್ ನೇತೃತ್ವದ ತ್ರಿಸದಸ್ಯರು ನ್ಯಾಕ್ ಸಮಿತಿಯಲ್ಲಿದ್ದಾರೆಂದು ಪ್ರಾಂಶುಪಾಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net