

*ಶ್ರೀಮುರುಘರಾಜೇಂದ್ರಸ್ವಾಮೀಜಿ ಅವರ 108 ನೇ ವರ್ಷದ ಆರಾಧನಾ ಮಹೋತ್ಸವ
ಚಾಮರಾಜನಗರ: ತಾಲೂಕಿನ ಮರಿಯಾಲ ಗ್ರಾಮದ ಮುರುಘರಾಜೇಂದ್ರಮಠ, ಭಕ್ತವೃಂದ ಹಾಗೂ ಗ್ರಾಮಸ್ಥರ ವತಿಯಿಂದ ಡಿ.16 ಮತ್ತು ಡಿ.17 ರಂದು ಶರಣಸಂಸ್ಕೃತಿವೈಭವ, ಮುರುಘರಾಜೇಂದ್ರಸ್ವಾಮೀಜಿ ಅವರ 108 ನೇ ವರ್ಷದ ಆರಾಧನಾ ಮಹೋತ್ಸವ, ಲಿಂಗೈಕ್ಯ ಪೂಜ್ಯರ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠಾಧೀಶರಾದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.16 ಸೋಮವಾರ ರಾತ್ರಿ ಬಸವೇಶ್ವರ, ಮಠದ ಗುರುಪರಂಪರೆಯ ಪೂಜ್ಯರ ಭಾವಚಿತ್ರದ ಮೆರವಣಿಗೆ, ವಚನಸಂಪುಟ, ಜಂಗಮ ಪುಷ್ಪಾಂದೋಳಿಕ ಜಂಗಮ ಮಹೋತ್ಸವ ನಂದಿಧ್ವಜ, ವೀರಗಾಸೆ, ಇನ್ನಿತರ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖಬೀದಿಗಳಲ್ಲಿ ಮೆರವಣಿಗೆ ಜರುಗಲಿದೆ ಎಂದು ಹೇಳಿದರು.
ಡಿ.17 ರಂದು ಬೆಳಗಿನ ಜಾವ 4ಕ್ಕೆ ಕರ್ತೃಗದ್ದುಗೆಗೆ ಪೂಜೆ, 7ಕ್ಕೆ ದೇವನೂರುಮಠದ ಮಹಾಂತಸ್ವಾಮೀಜಿ ಸ್ಥಲಧ್ವಜಾರೋಹಣ ನೆರವೇರಿಸುವರು. 10.30 ಕ್ಕೆ ಧಾರವಾಡ ಮಹಾಮನೆ ಮನಗುಂಡಿಮಠದ ಚನ್ನಬಸವಸ್ವಾಮೀಜಿ, ಬೆಳಗಾವಿ ಶ್ರೀ ಚರಂತೇಶ್ವರಮಠದ ಶರಣಬಸವದೇವರು ಧಾರ್ಮಿಕ ಪ್ರವಚನ ನೀಡುವರು. ಚಾಮರಾಜನಗರ ತಾಲೂಕಿನ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಅಂದು ರಾತ್ರಿ 10ಕ್ಕೆ ಮೇಲಾಜಿಪುರ ಗುರುಮಲ್ಲೇಶ್ವರ ನಾಟಕಮಂಡಳಿಯಿಂದ ಬಸವರಾಜವಿಜಯ ನಾಟಕ ಪ್ರದರ್ಶನ ನಡೆಯಲಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.