ಡಿ.12ಕ್ಕೆ ಬೆಳಗಾವಿ ಸುವರ್ಣಸೌಧ ಚಲೋ

07 CRP-1A.
Published on

ಚನ್ನರಾಯಪಟ್ಟಣ: ರಾಜ್ಯದಲ್ಲಿ ಬೆಳೆಯುವ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದಿರುವ ಕ್ರಮ ವಿರೋಧಿಸಿ ಕಬ್ಬು ಬೆಳೆಗಾರರಿಂದ ಡಿ.12ರಂದು ಬೆಳಗಾವಿ ಸುವರ್ಣಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಹೇಳಿದರು.

ಕೃಷಿ ಬೆಲೆ ಆಯೋಗ ಒಂದು ಟನ್ ಕಬ್ಬು ಬೆಳೆಯಲು 3,580 ರೂ.ಗಳಷ್ಟು ಖರ್ಚು ಬರುತ್ತದೆ ಎಂದು ವರದಿ ನೀಡಿದೆ. ಕೃಷಿ ತಜ್ಞ ಡಾ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಉತ್ಪಾದನಾ ವೆಚ್ಚದ ಜತೆಗೆ ಶೇ.50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ 5,370 ರೂ. ಗಳಾಗುತ್ತದೆ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆ ದರ ನಿಗದಿ ಸಮಿತಿ ರಚಿಸಿ, ಶೇ.9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ಅಧಿನಿಯಮ 2013ರ ಕಾಯ್ದೆ ರದ್ದುಪಡಿಸಬೇಕು. ರೈತ ವಿರೋಧಿ ಕಬ್ಬು ನಿಯಂತ್ರಣ ತಿದ್ದುಪಡಿ ಕರಡು ಆದೇಶ 2024ರ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ಮಸೂದೆಯ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಸಕ್ಕರೆ ಇಳುವರಿ ಪ್ರಕಟಣೆಯಲ್ಲಿ ಮತ್ತು ತೂಕದಲ್ಲಿ ಮೋಸ ನಡೆಯುತ್ತಿದ್ದು, ಪಾರದರ್ಶಕವಾಗಿ ಪರೀಕ್ಷಿಸಲು ಪ್ರತಿ ಕಾರ್ಖಾನೆ ವ್ಯಾಪ್ತಿಗೆ ಸಮಿತಿ ರಚಿಸಿ ಆ ಸಮಿತಿಗೆ ಐದು ಮಂದಿ ಕಬ್ಬು ಬೆಳೆಗಾರರ ಪ್ರತಿನಿಧಿಗಳ ನೇಮಿಸಬೇಕು ಇನ್ನು ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿ ಸುವರ್ಣ ಸುವರ್ಣಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಅತಿ ಹೆಚ್ಚು ಕಬ್ಬು ಬೆಳೆಗಾರರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್‌ಕುಮಾರ್, ಕರ್ನಾಟಕ ಪ್ರಾಂತ್ಯ ರೈತ ಸಂಘದ ತಾಲೂಕು ಅಧ್ಯಕ್ಷ ವಾಸು ಮಾತನಾಡಿದರು. ತಾಲೂಕಿನ ಕಬ್ಬು ಬೆಳೆಗಾರ ಕೆ.ಆರ್.ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net