ಡಿ.11ರಂದು ಹಣ್ಣೆಲೆ-ಚಿಗುರೆಲೆ ಕಾರ್ಯಕ್ರಮ

Published on

ಮೈಸೂರು: ಸ್ವರಾಂಜಲಿ ಸಾಂಸ್ಕೃತಿಕ ತಂಡದಿಂದ ಹಿರಿಯರು ಹಾಗೂ ಮಕ್ಕಳಿಗಾಗಿ ಡಿಸೆಂಬರ್ 11ರಂದು ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ‘ಹಣ್ಣೆಲೆ-ಚಿಗುರೆಲೆ’ ಎಂಬ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ವರಾಂಜಲಿ ತಂಡದ ಆಯೋಜಕ ಡಾ.ರಘುವೀರ್ ಹೇಳಿದರು.
ವಾಗ್ಮಿಗಳಾದ ಡಾ.ಗುರುರಾಜ ಕರ್ಜುಗಿ, ಪ್ರೊ.ಎಂ.ಕೃಷ್ಣೇಗೌಡ ಇತರರು ಆಗಮಿಸಲಿದ್ದಾರೆ. ಸ್ಪರ್ಧೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯರು, 14 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯರಿಗೆ ಪುಟ್ಟ ಮಕ್ಕಳು ಹಾಗೂ ಪುಟ್ಟಮಕ್ಕಳಿಗೆ ಹಿರಿಯರ ಅವಶ್ಯಕತೆ, ಅನಿವಾರ್ಯತೆ. ಪ್ರೀತಿ ದೊರೆಯದಿದ್ದಾಗ ಕಾಡುವ ಅನಿಶ್ಚಿತತೆ ವಿಷಯವಾಗಿ ಭಾಷಣ ಇರಲಿದೆ. ಯಾವುದೇ ಭಾಷೆಯಲ್ಲಿ ಮೂರು ನಿಮಿಷದ ಒಂದು ವಿಡಿಯೋ ಚಿತ್ರೀಕರಿಸಬೇಕು. ಭಾಷಣ ಓದುವಂತಿಲ್ಲ. ಮೊಬೈಲ್ ಫೋನ್ ನೋಡಿಕೊಂಡು ಮಾತನಾಡಬೇಕು. ಬಳಿದ ವಿಡಿಯೋ ತುಣುಕನ್ನು ಮಕ್ಕಳಾದರೆ 8095180174 ವಾಟ್ಸ್‌ಆ್ಯಪ್ ಸಂಖ್ಯೆಗೆ, ಹಿರಿಯರಾದರೆ 8095180329ಕ್ಕೆ ಕಳುಹಿಸಬೇಕು. ಆಸಕ್ತರು ನವೆಂಬರ 15ರೊಳಗೆ ಸಲ್ಲಿಸಬೇಕು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್ ಅಥವಾ ಇತರ ಯಾವುದಾದರೂ ದಾಖಲೆಯ ಜೆರಾಕ್ಸ್ ಪ್ರತಿ, ವಿಳಾಸದ ಮತ್ತು ಮೊಬೈಲ್ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಮೂಲಕ ಸಲ್ಲಿಸಬೇಕು. ಸ್ಪರ್ಧೆಗೆ ಭಾಷೆ ನಿರ್ಬಂಧ ಇರುವುದಿಲ್ಲ, ಅಲ್ಲದೆ ಯಾವುದೇ ಪ್ರವೇಶ ಶುಲ್ಕ ಇಲ್ಲ. ಈ ಸ್ಪರ್ಧೆಯಲ್ಲಿ ವಿಜೇತರಾದ ಎರಡು ವಿಭಾಗಗಳ ಮೊದಲ ಮೂವರಿಗೆ ವಿಶೇಷ ಬಹುಮಾನ, ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಅಲ್ಲದೆ ನ.13ರಂದು 60 ವರ್ಷ ಮೇಲ್ಪಟ್ಟವರಿಗೆ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ವಾದ್ಯ-ಕರೋಕೆ ಅಥವಾ ಯಾವುದೇ ಹಿಮ್ಮೇಳ ಇಲ್ಲದೆ ನಾಲ್ಕು ನಿಮಿಷಗಳ ಅವಧಿಯ ಗಾಯನ ಪ್ರಸ್ತುತ ಪಡಿಸಬೇಕು.
ಸಂಘಟಕರಾದ ಡಾ. ಲಾವಣ್ಯ ಶೆಣೈ, ರೂಪಶ್ರೀ, ಆನಂದ್‌ಮಧ್ವ, ಬಾಲಾಜಿ, ಮೀರಾ, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net