ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಡ್ಯದ ಕಾಯಕಯೋಗಿ ಫೌಂಡೇಷನ್‌ನಿಂದ ಡಿ.11 ರಂದು ರಾಜ್ಯ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಹೇಳಿದರು.
ಪ್ರತಿ ವರ್ಷ ರಾಜ್ಯೋತ್ಸವದ ಸಮಯದಲ್ಲಿ ಮಂಡ್ಯ ಮ್ಯಾರಥಾನ್ ಆಯೋಜಿಸಿಕೊಂಡು ಬರಲಾಗುತ್ತಿದೆ. ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪೊಲೀಸರು, ಕ್ರೀಡಾಪಟುಗಳು, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲರಿಗೂ ಟೀ-ಶರ್ಟ್ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಪುರುಷ, ಮಹಿಳೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿಭಾಗ ಇರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಇರುವ ಮಂಡ್ಯ ಪ್ರವಾಸಿ ಮಂದಿರದ ಬಳಿಯಿಂದ ಅಂದು ಬೆಳಗ್ಗೆ 6 ಗಂಟೆಗೆ ಓಟ ಆರಂಭವಾಗಲಿದ್ದು, ಕೆ.ವಿ.ಶಂಕರಗೌಡ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ, ಜಿಲ್ಲಾ ಕಾರಾಗೃಹ, ಕ್ಯಾತನಗೆರೆ ಬಡಾವಣೆ ಮಾರ್ಗವಾಗಿ ಬೇವಿನಹಳ್ಳಿ ಗ್ರಾಮದ ಪ್ರವೇಶದ್ವಾರದವರೆಗೆ ಇರಲಿದೆ ಎಂದರು.
ವಿಜೇತರಿಗೆ 10 ಸಾವಿರ ರೂ. ಪ್ರಥಮ, 7500 ರೂ. ದ್ವಿತೀಯ, 5 ಸಾವಿರ ರೂ. ತೃತೀಯ ಬಹುಮಾನ ನೀಡಲಾಗುವುದು. ಆಸಕ್ತರು ಮೊ.9740011624/ 9980605484 ಸಂಪರ್ಕಿಸಬಹುದು ಎಂದು ಹೇಳಿದರು.
ಆಯೋಜಕರಾದ ಪ್ರದೀಪ್‌ಕುಮಾರ್, ಕಿರುಗಾವಲು ಬಾಲಚಂದ್ರ, ಅನಿಲ್‌ಕುಮಾರ್ ಇದ್ದರು.