ಡಾ.ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ

21_HSN_09(A)
Published on

ಹಾಸನ: ನಗರದ ಗಂಧದ ಕೋಟೆ ಸರ್ಕಲ್‌ನಲ್ಲಿ ಶನಿವಾರ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಶಾಸಕ ಪ್ರೀತಂ ಗೌಡ ಅವರು ಪ್ರತಿಮೆ ಅನಾವರಣಗೊಳಿಸಿ ಪೂಜೆ ಸಲ್ಲಿಸಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ದಾರ್ಶನಿಕರಾಗಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನ ನಮಗೆ ಆದರ್ಶವಾಗಿದೆ ಎಂದರು.
ಜವೇನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅನ್ನ ದಾಸೋಹ ,ಅಕ್ಷರ ದಾಸೋಹ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ದೇವರು ಎಂದೇ ಬಿಂಬಿತವಾಗಿದ್ದರು ಎಂದು ಬಣ್ಣಿಸಿದರು.


ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಸಾಮೀಜಿಯವರ ಕೆಲಸ ಕಾರ್ಯಗಳು ಎಂದಿಗೂ ಅಜರಾಮರ. ಅವರ ಕಾರ್ಯವೈಖರಿಯನ್ನು ಪ್ರತಿಯೊಬ್ಬರೂ ಪಾಲಿಸಿದರೆ ಉತ್ತಮ ಹಾಗೂ ಪ್ರಬುದ್ಧ ದೇಶವನ್ನು ಕಟ್ಟಲು ಸಾಧ್ಯ ಎಂದರು.
ತಣ್ಣೀರು ಹಳ್ಳ ಸರ್ಕಲ್‌ಗೆ ಶಿವಕುಮಾರ ಸ್ವಾಮೀಜಿ ಸರ್ಕಲ್ ಎಂದು ಹೆಸರು ಇಡುವಂತೆ ಹಾಸನ ನಗರಸಭೆ ಹಾಗೂ ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದರು.
ಸ್ಮರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು: ಇದೇ ವೇಳೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು, ಪುರುಷರು, ಮಹಿಳೆಯರು ರಕ್ತದಾನ ಮಾಡಿದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿರು.


ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವರೂಪ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಬಸವರಾಜ್, ಗಂಧದ ಕೋಟೆ ಸರ್ಕಲ್ ಆಟೋ ಸಂಘದ ಸದಸ್ಯರಾದ ಮೋಹನ್ ಕುಮಾರ್, ಸುಬ್ರಹ್ಮಣ್ಯ, ಯು.ಎಸ್ ಬಸವರಾಜ್, ದೇವೀರಯ್ಯ, ಯು.ಎಸ್ ಮಲ್ಲಿಕಾರ್ಜುನ, ಶೋಬನ್ ಬಾ, ಹೇಮಂತ್ ಕುಮಾರ್, ನವೀನ್, ಅವೀನಾಶ್, ಮೋಹನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net