ಡಾ.ರಾಜ್ ಚಲನಚಿತ್ರಗಳಲ್ಲಿವೆ ಅತ್ಯುತ್ತಮ ಸಂದೇಶ

CTD DR.RAJKUMAR......
Published on

ಚಿತ್ರದುರ್ಗ: ವರನಟ ಡಾ.ರಾಜ್‌ಕುಮಾರ್ ಅವರು ನಟಿಸಿರುವ ಚಲನಚಿತ್ರಗಳಲ್ಲಿ ಜೀವನಕ್ಕೆ ಅಳವಡಿಸಿಕೊಳ್ಳುವಂಥ ಅತ್ಯುತ್ತಮ ಸಂದೇಶಗಳಿವೆ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯು ಕ್ತಾಶ್ರಯದಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕುಗ್ರಾಮದಿಂದ ಬಂದ ಮುತ್ತುರಾಜ್ ಚಲನಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. 2017ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್‌ಕುಮಾರ್ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಆದೇಶಿಸಿದ್ದರು ಎಂದರು.

ರಾಜ್‌ಕುಮಾರ್ ತಮ್ಮ ಇಚ್ಛೆಯಂತೆ ಮರಣದ ನಂತರ ತಮ್ಮ ನೇತ್ರಗಳನ್ನು ದಾನ ಮಾಡಿದ್ದಾರೆ. ಇಂದಿಗೂ ಅವರ ಹೆಸರಲ್ಲಿ ನೇತ್ರ ದಾನ ಶಿಬಿರಗಳು ನಡೆಯುತ್ತಿವೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಸ್ಥಾಪನೆ, ಅನಾಥಾಶ್ರಮಗಳಿಗೂ ನೆರವು ನೀಡಿದ್ದಾರೆ. ಅವರ ಮರಣದ ನಂತರ ಅವರ ಕುಟುಂಬ ವರ್ಗದವರು ಅವರು ರೂಪಿಸಿದ್ದ ಒಳ್ಳೆಯ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ರಾಜ್‌ಕುಮಾರ್ ಸರಳತೆ ಮತ್ತು ಜೀವನ ಮೌಲ್ಯ, ತತ್ವಗಳ ಪಾಲನೆ ಮೂಲಕ ಸದಾ ಲವಲವಿಕೆಯಿಂದ ಇರುತ್ತಿದ್ದರು. ಅವರ ನಟನೆಯ ಪ್ರತಿ ಸಿನಿಮಾವೂ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ನೋಡುವಂತಿವೆ. ಕನ್ನಡ ಚಿತ್ರರಂಗ ಹಾಗೂ ಸಂಗೀತಕ್ಕೆ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.

ಉಪನ್ಯಾಸ ನೀಡಿದ ಸಾಹಿತಿ ಹುರಳಿ ಎಂ. ಬಸವರಾಜ್, ರಾಜ್‌ಕುಮಾರ್ ಸರಳ, ಸಜ್ಜನಿಕೆ, ವಿನಯ ವಂತಿಕೆಯ ಆದರ್ಶ ವ್ಯಕ್ತಿಯಾ ಗಿದ್ದಾರೆ. ನಟಿಸಿದ ಸಿನಿಮಾಗಳೆಲ್ಲವೂ ಸೂಪರ್‌ಹಿಟ್ ಆಗಿವೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿದರು. ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂ ರಾವ್, ಕೆಡಿಪಿ ಸದಸ್ಯ ನಾಗರಾಜ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ರಂಗಕರ್ಮಿ ಕೆಪಿಎಂ ಗಣೇಶಯ್ಯ ಸೇರಿ ಅನೇಕ ರಾಜ್‌ಕುಮಾರ್ ಅಭಿಮಾನಿಗಳು ಇದ್ದರು.

ಚಿತ್ರದುರ್ಗದ ಎಂ.ಕೆ. ಹರೀಶ್ ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.

----

ಕೋಟ್

ತೆರೆಯ ಮೇಲಾದರೂ ಸರಿ ದುಶ್ಚಟ ಬಿಂಬಿಸುವ ಯಾವುದೇ ಪಾತ್ರವನ್ನು ರಾಜ್‌ಕುಮಾರ್ ಅಭಿನಯಿಸಲಿಲ್ಲ. ಅವರಿಗೂ ಚಿತ್ರ ದುರ್ಗಕ್ಕೂ ಬಹಳ ನಂಟಿದೆ. ಅವರಿಗೆ ಕುಮಾರ ರಾಜ್ ಎಂದು ಚಿತ್ರದುರ್ಗದವರು ಬಿರುದು ನೀಡಿದ್ದಾರೆ. ಅವರ ಜನ್ಮ ದಿನದ ಶತಮಾನೋತ್ಸವದ ಅಂಗವಾಗಿ ಡಾ.ರಾಜ್ ಹೆಸರಿನಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಶಾಸಕ ವೀರೇಂದ್ರಪಪ್ಪಿ ಅವರು ಮಾಡಬೇಕು.

ಎಂ.ಕೆ. ತಾಜ್‌ಪೀರ್, ಕುಡಾ ಅಧ್ಯಕ್ಷ

---

ಕೋಟ್

ನಟನೆ ಹಾಗೂ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕಲಾವಿದ ರಾಜ್‌ಕುಮಾರ್. ಪಾತ್ರಗಳ ಆಯ್ಕೆಯಲ್ಲಿ ಅವರು ಬಹಳ ಜಾಗೃತೆ ವಹಿಸುತ್ತಿದ್ದರು.

ಬಿ.ವಿ. ತುಕರಾಂರಾವ್, ಜಿಲ್ಲಾ ವಾರ್ತಾಧಿಕಾರಿ

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net