ಡಾ.ರಾಜಕುಮಾರ ಕನ್ನಡಾಭಿಮಾನ ಎಲ್ಲರಲ್ಲೂ ಮೂಡಲಿ - ಮೊಹಮ್ಮದ್ ರೋಷನ್

24 Jaggu 6
Published on

ಬೆಳಗಾವಿ: ವರನಟ ಡಾ.ರಾಜಕುಮಾರ ಅವರು ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದ ಹೆಮ್ಮೆಯಾಗಿದ್ದರು. ಅವರ ನಿಷ್ಠೆ, ಪ್ರಾಮಾಣಿಕತೆ, ಯೋಗಾಭ್ಯಾಸ, ಸರಳತೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದರು.

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ವಾರ್ತಾ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವರನಟ ಡಾ.ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಡಾ.ರಾಜಕುಮಾರ್ ಅವರ ಚಲನಚಿತ್ರಗಳನ್ನು ನೋಡುವುದರ ಮೂಲಕ ನಾನು ಕನ್ನಡ ಕಲಿತಿದ್ದೇನೆ.

ರಾಜಕುಮಾರ ಅವರು ಕನ್ನಡ ಭಾಷೆ ಬಿಟ್ಟು ಬೇರಾವ ಭಾಷೆಗಳಲ್ಲಿ ನಟಿಸದ ತಮ್ಮ ಕನ್ನಡ ಅಭಿಮಾನ ತೋರಿದ್ದಾರೆ. ಅವರಂತೆ ನಾವೆಲ್ಲರೂ ನಾಡು-ನುಡಿಯ ಬಗ್ಗೆ ಅಭಿಮಾನ ಹೊಂದಬೇಕು ಎಂದರು. ಇದೇ ವೇಳೆ ಜಿಲ್ಲಾಧಿಕಾರಿ ಅವರು ಡಾ.ರಾಜಕುಮಾರ ಅವರ ಶ್ರಾವಣ ಬಂತು ಚಿತ್ರದ ‘ಇದೇ ರಾಗದಲ್ಲಿ ಇದೇ ತಾಳದಲ್ಲಿ’ ಹಾಡನ್ನು ಹಾಡಿ ಕನ್ನಡಪ್ರೇಮ ಮೆರೆದರು.

ಡಾ.ರಾಜಕುಮಾರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶಿರೀಷ್ ಜೋಶಿ, ಡಾ. ರಾಜಕುಮಾರ ಜನರ ಅಪಾರ ಪ್ರೀತಿ ಗಳಿಸಿದ್ದರು. ಅವರು ಕೇವಲ ಒಬ್ಬ ನಟ ಅಲ್ಲ; ಅವರು ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ಗೋಕಾಕ ಚಳವಳಿ ಮೂಲಕ ಕನ್ನಡ ನಾಡಿಗೆ ಅವರು ಕೊಟ್ಟ ಕೊಡುಗೆ ದೊಡ್ಡದು. ಮೇರು ನಟರಾಗಿದ್ದ ಅವರು, ಸಾಮಾಜಿಕ ಸಮಸ್ಯೆಗಳ ನಿವಾರಣೆಯ ಕಥಾಹಂದರದ ಹಲವಾರು ಚಲನಚಿತ್ರ ನಮಗೆ ನೀಡಿದ್ದಾರೆ. ರಾಜಕುಮಾರ ಅವರ 77 ವರ್ಷಗಳ ಜೀವನ ಅದ್ಭುತ ಪ್ರಯಾಣವಾಗಿತ್ತು ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಾರ್ತಾ ಇಲಾಖೆಯ ಸಮಸ್ತ ಸಿಬ್ಬಂದಿ ಇತರರಿದ್ದರು. ಸುನೀತಾ ದೇಸಾಯಿ ನಿರೂಪಿಸಿದರು.

ಪತ್ರಕರ್ತ ಮಂಜುನಾಥ ಹುಡೇದ ಹಾಗೂ ಗೋಕಾಕದ ಮಧುರ ಸಂಗೀತ ಗೆಳೆಯರ ಬಳಗದ ರಾಮಚಂದ್ರ ಕಾಕಡೆ ಅವರು ಪ್ರಸ್ತುತಪಡಿಸಿದ ಡಾ.ರಾಜಕುಮಾರ ಅವರ ಜನಪ್ರಿಯ ಗೀತಗಾಯನವು ಸಭಿಕರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net