

ಬೇಲೂರು: ಮಲೆನಾಡಿನಲ್ಲಿ ಕೆಲ ವರ್ಷಗಳಿಂದ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಬಡವರ, ಕ್ರಿಯಾಶೀಲ ತಾಲೂಕಿನ ಅರೇಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾರನ್ನು 74ನೇ ಗಣರಾಜ್ಯೋತ್ಸವದ ಅಂಗವಾಗಿ ದೇಶ ಭಕ್ತರ ಬಳಗದಿಂದ 2022 ನೇ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಕುಮಾರ್ ಮಾತನಾಡಿ, ವೈದ್ಯೋ ನಾರಾಯಣ ಹರಿ ಎಂಬಂತೆ ದೇವರ ರೂಪದಲ್ಲಿ ಧರೆಯ ಮೇಲೆ ನಾಡಿನ ಜನತೆಯ ಸೇವೆಗೈಯುತ್ತಿರುವ ನಾಡಿನ ಸಮಸ್ತ ವೈದ್ಯರ ಸೇವೆ ಅನನ್ಯವಾದುದು, ಶಸ್ತ್ರ ಚಿಕಿತ್ಸೆ ಬಂಜೆತನ ನಿವಾರಣಾ ಶಿಬಿರ, ತಮ್ಮ ತಂದೆ ಜನುಮ ದಿನದ ಅಂಗವಾಗಿ ಆರೋಗ್ಯ ಶಿಬಿರ, ತಾಯಿಯ ಜನ್ಮ ದಿನದ ಪ್ರಯುಕ್ತ ಗರ್ಭಿಣಿಯರಿಗೆ ಸೀಮಂತ ಸಮಾರಂಭ, ಮಹಿಳಾ ದಿನಾಚರಣೆಯಂದು ರಕ್ತದಾನ ಶಿಬಿರ, ಪರಿಸರ ದಿನಾಚರಣೆಯಂದು ಗಿಡ ನೆಡುವಿಕೆ, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಶಾಲಾ ಮಕ್ಕಳಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ, ಆಸ್ಪತ್ರೆಯಲ್ಲಿ ಗ್ರಂಥಾಲಯದ ಸ್ಥಾಪನೆ, ಹೀಗೆ ಸಾಕಷ್ಟು ಸಾರ್ವಜನಿಕವಾಗಿ ಸಮಾಜ ಸೇವೆಯೊಂದಿಗೆ ನಿಸ್ವಾರ್ಥ ಮನೋಭಾವದಿಂದ ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿರುವ ಡಾ.ಮಮತಾ ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮಮತಾ, ಜೀವನದಲ್ಲಿ ಏನಾದರೂ ಗುರಿ ಇಟ್ಟುಕೊಂಡು ಮುಂದುವರೆಯಬೇಕು. ಆಗ ಮಾತ್ರ ಏನನ್ನದರೂ ಸಾಧಿಸಲು ಸಾಧ್ಯ. ಅಲ್ಲದೆ ಕಷ್ಟದ ಸಂದರ್ಭದಲ್ಲಿಯೂ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಇಲ್ಲಿನ ಅಭಿವೃದ್ಧಿಗೆ ಹಗಲು ಇರಳು ಶ್ರಮಿಸುತ್ತಿರುವ ನಮ್ಮ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಯುವ ಸಾಹಿತಿ ನಿರಂಜನ್, ದೇಶ ಭಕ್ತರ ಬಳಗದ ಖಜಾಂಚಿ ಪ್ರಕಾಶ್, ವೈದ್ಯೆ ಡಾ.ಅನುಪಮ, ಡಾ.ಸುಶ್ರುತ ಸಿಬ್ಬಂದಿ ಇದ್ದರು.