

ಹಾಸನ: ದಮನಿತರ ಧ್ವನಿಯಾಗಿದ್ದ ಡಾ.ಬಾಬು ಜಗಜೀವನರಾಂ ಅವರು ಹಸಿರುಕ್ರಾಂತಿ ಹರಿಕಾರರು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ.ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನರಾಂ ಅವರ 38 ನೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕಟ್ಟಿಬದ್ದರಾಗಿ ಅತೀವ ಬುದ್ಧಿ ಮತ್ತೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಗಮನ ಸೆಳೆದಿದ್ದರು ಎಂದು ಅವರ ಜೀವನ ಮತ್ತು ಆಡಳಿತವನ್ನು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಹಲವು ಮೊದಲುಗಳಿಗೆ ಬಾಬು ಜಗಜೀವನರಾಂ ಅವರು ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಅವುಗಳಲ್ಲಿ ಏರುಪೇರು ಆಗದಂತೆ ಸಹಕಾರ ಸಹಬಾಳ್ವೆಯಿಂದ ಮುನ್ನೆಡೆಸಬೇಕು ಎಂದರು.
ದಲಿತ ಸಂಘಟನೆಗಳ ಮುಖಂಡ ಎಚ್. ಕೆ.ಸಂದೇಶ್ ಮತ್ತು ವಿಜಯ್ ಕುಮಾರ್ ಅವರು ಮಾತನಾಡಿ, ಹಸಿರುಕ್ರಾಂತಿ ಹರಿಕಾರರಾದ ಬಾಬು ಜಗಜೀವನರಾಂ ಅವರ ಜೀವನ ಘಟನಾವಳಿಗಳು ಮತ್ತು ಅವರ ಆಡಳಿತ ಕುರಿತು ಸ್ಮರಿಸಿದರು. ನಗರದಲ್ಲಿ ಬಾಬು ಜಗಜೀವನರಾಂ ಅವರ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಸಮಾಜ ಸೇವಕರಾದ ಮಹಾಂತಪ್ಪ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.