ಡಾ.ಫ್ರಾನ್ಸಿಸ್ ಸೆರಾವೋ ಮೈಸೂರು ಧರ್ಮಪ್ರಾಂತ್ಯದ ಬಿಷಪ್

mysore
Published on

ಮೈಸೂರು: ಮೈಸೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ(ಬಿಷಪ್)ರಾಗಿ ಡಾ.ಫ್ರಾನ್ಸಿಸ್ ಸೆರಾವೋ ಅಧಿಕಾರ ಸ್ವೀಕರಿಸಿದರು.

ನಗರದ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಈ ಧರ್ಮಪ್ರಾಂತ್ಯದ ಹೊಸ ಆಧ್ಯಾತ್ಮಿಕ ನಾಯಕರಾಗಿ ಹೊರಹೊಮ್ಮಿದರು. ಅವರಿಗೆ ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರೆಸ್ ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು.

ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಕಾಡೂ ಕಾರ್ಯಕ್ರಮ ನಡೆಸಿಕೊಟ್ಟರೆ, ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ಬೋಧಕರಾದ ಲಿಯೋಪೋಲ್ಡ್‌ಗಿರೆಲ್ಲಿ ಅಧ್ಯಕ್ಷತೆ ವಹಿಸಿದ್ದರು. ಸಂಜೆ ಚರ್ಚ್‌ನಲ್ಲಿ ಬಲಿಪೂಜೆಯೊಂದಿಗೆ ಆಚರಣೆಗೆ ಚಾಲನೆ ನೀಡಲಾಯಿತು. ಮೊದಲಿಗೆ ಹೊಸ ನೇಮಕಾತಿ ಆದೇಶ ಪ್ರತಿಯನ್ನು ಓದಲಾಯಿತು. ಬಳಿಕ ವಿಶ್ವಾಸ ಸಂಗ್ರಹ ನಡೆಯಿತು. ಇದನ್ನು ಅಧಿಕೃತಗೊಂಡ ನಂತರ ನೂತನ ಬಿಷಪ್ ಆಗಿ ಡಾ.ಫ್ರಾನ್ಸಿಸ್ ಸೆರೋವಾ ಪ್ರಮಾಣ ವಚನ ಸ್ವೀಕರಿಸಿದರು

ಈ ಸಂದರ್ಭದಲ್ಲಿ ಹೊಸ ಧರ್ಮಾಧ್ಯಕ್ಷರ ಪ್ರತಿಷ್ಠಾಪನೆ ನೆರವೇರಿತು. ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರೆಸ್ ಅವರು ಪ್ರಮುಖ ಚರ್ಚ್‌ಗಳ, ಸಮಯದಾಯದ ದೇವಾಲಯ ಬೀಗದ ಕೀಗಳನ್ನು ಹಸ್ತಾಂತರ ಮಾಡಿದರು. ಪಾಲನಾ ದಂಡ ಪ್ರದಾನ ಮಾಡುವುದರೊಂದಿಗೆ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲಾಯಿತು.

‘ಮೈಸೂರು ಧರ್ಮಪ್ರಾಂತ್ಯ ವಿಶಿಷ್ಟವಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿದೆ. ಹೊಸ ಚಿಂತನೆಯೊಂದಿಗೆ ನೂತನ ಬಿಷಪ್ ಮುನ್ನಡೆಸಬೇಕು. ಭಕ್ತ ಸಮುದಾಯದ ಒಳಿತಿಗಾಗಿ ಉತ್ತಮ ಸೇವಾ ಕಾರ್ಯಗಳನ್ನು ಅನುಷ್ಠಾನಕ್ಕೆ ತರಬೇಕು.

ಈ ಎಲ್ಲ ಕಾರ್ಯಗಳನ್ನು ಮಾಡಲು ಏಸುಕ್ರಿಸ್ತ ಆಶೀರ್ವಾದ ಮಾಡಲಿ’ ಎಂದು ಡಾ.ಬರ್ನಾಡ್ ಮೊರೆಸ್ ಪ್ರಾರ್ಥಿಸಿದರು.

ಈ ಧರ್ಮಪ್ರಾಂತ್ಯ ವ್ಯಾಪ್ತಿಯ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಸೇರಿ ಇತರ ಜಿಲ್ಲೆಗಳ ಚರ್ಚ್‌ಗಳ ಫಾದರ್‌ಗಳು, ಪ್ರಮುಖರಾದ ಫಾ.ಆಲ್ಪ್ರಾಡ್ ಜಾನ್ ಮೆಂಡೋನ್ಸಾ, ಫಾ.ಸೆಬಾಸ್ ಇಯನ್ ಅಲೆಕ್ಸಾಂಡರ್, ಫಾ.ಎಡ್ವರ್ಡ್ ಸಾಲ್ಡಾನ, ಮೈಕೆಲ್ ನರೋನಾ ಸೇರಿದಂತೆ ಭಕ್ತ ಸಮೂಹ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಈ ಧರ್ಮಕ್ಷೇತ್ರದ ಕ್ಯಾಥೋಲಿಕ್ ಸಮುದಾಯಕ್ಕೆ ಇದು ಮಹತ್ವದ ಐತಿಹಾಸಿಕ ಕ್ಷಣವಾಯಿತು. ನೂತನ ಧರ್ಮಾಧ್ಯಕ್ಷರ ನಾಯಕತ್ವ, ಸೇವೆಯ ಹೊಸ ಆಧ್ಯಾತ್ಮಿಕ ಯುಗಕ್ಕೂ ನಾಂದಿ ಹಾಡಿತು.

ಫ್ರಾನ್ಸಿಸ್ ಸೆರಾವೋ ಅವರು 1959ರ ಆಗಸ್ಟ್‌ನಲ್ಲಿ 15ರಂದು ಮೂಡುಬಿದಿರೆಯಲ್ಲಿ ಜನಿಸಿದವರು. 1992ರಲ್ಲಿ ಗುರುವಾಗಿ ದೀಕ್ಷೆ ಪಡೆದವರು. ಆನೇಕಲ್(ಬೆಂಗಳೂರು ಮಹಾಧರ್ಮ ಪ್ರಾಂತ್ಯ), ಮುಂಡಗೋಡದಲ್ಲಿ( ಕಾರವಾರ ಧರ್ಮಪ್ರಾಂತ್ಯ) ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ವಿದ್ಯಾರ್ಥಿಗಳಿಗೆ ದೈವಶಾಸ್ತ್ರ ಕಲಿಸಿದ ಅವರು, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಶಿವಮೊಗ್ಗದ ಧರ್ಮಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮೈಸೂರಿನ ನೂತನ ಧರ್ಮಾಧ್ಯಕ್ಷರಾಗಿದ್ದಾರೆ.

ಬರ್ನಾಡ್ ಮೊರೆಸ್‌ಗೆ ಬೀಳ್ಕೊಡುಗೆ: ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಆಗಿ ಕಾರ್ಯನಿರ್ವಹಿಸಿದ ಡಾ.ಬರ್ನಾಡ್ ಮೊರೆಸ್ ನಿವೃತ್ತರಾದರು. ಅವರಿಗೆ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಿ ಅವರ ಸೇವೆಯನ್ನು ಸ್ಮರಿಸಲಾಯಿತು.

ಮೈಸೂರು ಧರ್ಮಕ್ಷೇತ್ರಕ್ಕೆ  3ನೇ ಬಿಷಪ್:

ಮೈಸೂರು ಧರ್ಮಕ್ಷೇತ್ರಕ್ಕೆ ಡಾ.ಫ್ರಾನ್ಸಿಸ್ ಸೆರಾವೋ 3ನೇ ಬಿಷಪ್. 1941ರಲ್ಲಿ ಮರು ರಚಿತಗೊಂಡ ಈ ಕ್ಷೇತ್ರಕ್ಕೆ ಮೊಟ್ಟ ಮೊದಲ ಧರ್ಮಾಧ್ಯಕ್ಷರಾಗಿ ಡಾ.ರೇನೆ ಫ್ಯೂಗ ನೇಮಕಗೊಂಡಿದ್ದರು.

ಈ ಕ್ಷೇತ್ರ ವ್ಯಾಪ್ತಿಯಲ್ಲಿ 1.18 ಲಕ್ಷ ಕ್ಯಾಥೋಲಿಕ ಜನಸಂಖ್ಯೆ ಹೊಂದಿದೆ. 90 ಧರ್ಮಕೇಂದ್ರಗಳು, 43 ಉಪಧರ್ಮಕೇಂದ್ರಗಳು ಕ್ಯಾಥೋಲಿಕ ಭಕ್ತ ವಿಶ್ವಾಸಿಗಳ ಆಧ್ಯಾತ್ಮಿಕ ಜೀವನಕ್ಕಾಗಿ ಸೇವೆ ಸಲ್ಲಿಸುತ್ತಿವೆ. 128 ಧರ್ಮಗುರು, 14 ವಿವಿಧ ಧಾರ್ಮಿಕ ಗುರು ಸೇವೆ ಸಲ್ಲಿಸುತ್ತಿದ್ದಾರೆ. ಇದು ಶಾಲಾ-ಕಾಲೇಜು, ಸಾಮಾಜಿಕ ಮತ್ತು ಆರೋಗ್ಯ ಸೇವಾ ಕೇಂದ್ರಗಳು, ಆಸ್ಪತ್ರೆಗಳು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net