ಡಾ.ಪಟ್ಟದ್ದೇವರ 22ನೇ ಸ್ಮರಣೋತ್ಸವ

pattaddevaru din
Published on

ಬೀದರ್: ಈ ಭಾಗದ ನಡೆದಾಡುವ ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ 22ನೇ ಸ್ಮರಣೋತ್ಸವ ನಗರ ಸೇರಿ ಜಿಲ್ಲಾದ್ಯಂತ ಕರೊನಾ ಹಿನ್ನೆಲೆಯಲ್ಲಿ ಶುಕ್ರವಾರ ಶೃದ್ಧೆ, ಭಕ್ತಿಯೊಂದಿಗೆ ಸರಳವಾಗಿ ಆಚರಿಸಲಾಯಿತು.

ಕಳೆದ ವರ್ಷದಂತೆ ಈ ಸಲವೂ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಕರೊನಾ ಅಡ್ಡಿಯಾಯಿತು. ವಿವಿಧೆಡೆ ಡಾ.ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನಮಿಸಲಾಯಿತು. ಪಟ್ಟದ್ದೇವರು ಕನ್ನಡ, ಶಿಕ್ಷಣ, ಧಾರ್ಮಿಕ, ಅಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿದ ಅಮೋಘ ಸೇವೆ ಸ್ಮರಿಸಲಾಯಿತು.

ನಗರದಲ್ಲಿ ಜರುಗಿದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಆದ ಭಾರತೀಯ ಬಸವ ಬಳಗ ಜಿಲ್ಲಾ ಅಧ್ಯಕ್ಷ ಬಾಬು ವಾಲಿ ಪೂಜೆ ಸಲ್ಲಿಸಿ ಮಾತನಾಡಿ, ಈ ಭಾಗದಲ್ಲಿ ನಾಡು, ನುಡಿ ಸಂರಕ್ಷಣೆಯಲ್ಲಿ ಪೂಜ್ಯರ ಶ್ರಮವು ಅಪಾರ ಹಾಗೂ ಅವಿಸ್ಮರಣೀಯ. ಅವರ ತತ್ವಾದರ್ಶಗಳಲ್ಲಿ ನಡೆದರೆ ಸಮ ಸಮಾಜ, ಸುಂದರ ಸಮಾಜ ನಿರ್ಮಿಸಬಹುದು ಎಂದರು.

ಜೆಸ್ಕಾಂ ನಿರ್ದೇಶಕ ಬಾಬುರಾವ ಕಾರಬಾರಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಮುಖರಾದ ವಿಜಯಕುಮಾರ ಪಾಟೀಲ್ ಯರನಳ್ಳಿ, ಶಾಂತವೀರ ಕೇಸ್ಕರ್ ಇತರರಿದ್ದರು.

ನಗರದ ವಿದ್ಯಾನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉದ್ಯಮಿ ಜಯರಾಜ ಖಂಡ್ರೆ ಮಾತನಾಡಿ, ಪಟ್ಟದ್ದೇವರು ಕಾಯಕವೇ ಕೈಲಾಸವೆಂಬ ತತ್ವ ಜೀವನದಲ್ಲಿ ಕಾರ್ಯರೂಪಕ್ಕೆ ತಂದು ಸಮಾಜಕ್ಕೆ ಮಾದರಿಯಾಗಿ ಬದುಕಿದ್ದರು. ಅವರು ಸಮಾಜದ ಆದರ್ಶ ಗುರುಗಳಾಗಿದ್ದಾರೆ ಎಂದು ಹೇಳಿದರು.

ಶಾಂತಾ ಖಂಡ್ರೆ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ, ಉಮಾಕಾಂತ ಮೀಸೆ, ಶಾಮರಾವ ಡೊಂಗರಗೆ, ಗೀತಾ ಶಾಂತಕುಮಾರ, ಬಂಡೆಪ್ಪ ಗುನ್ನಳ್ಳಿ, ಶಿವಶಂಕರ, ಅಶೋಕ ಬಚ್ಚಾ, ಸತ್ಯನಾರಾಯಣ ಇದ್ದರು.

ಗಡಿ ಭಾಗದಲ್ಲಿ ಕನ್ನಡ ಗಟ್ಟಿಯಾಗಿ ನೆಲೆ ಕಾಣಲು ಡಾ.ಚನ್ನಬಸವ ಪಟ್ಟದ್ದೇವರು ಹಾಕಿಕೊಟ್ಟ ಬುನಾದಿಯೇ ಕಾರಣ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೂ ಮುನ್ನುಡಿ ಬರೆದ ಮಹಾಪುರುಷರು ಅವರು. 20ನೇ ಶತಮಾನದ ಬಸವಣ್ಣನವರಾಗಿ ಈ ಭಾಗವನ್ನು ಬೆಳಗಿದ್ದಾರೆ.| ಬಾಬು ವಾಲಿ, ಬಿಡಿಎ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net