ಡಾ.ಪಂಡಿತ್ ರಾಜಗೋಪಾಲ ಕಲ್ಲೂರಕರ್ ಅವರಿಗೆ ಹಡಪದ ಪ್ರಶಸ್ತಿ

27web
Published on

ಮೈಸೂರು: ನಿಜವಾದ ಗುರು-ಶಿಷ್ಯ ಪರಂಪರೆ ಈಗಲೂ ಜೀವಂತವಾಗಿ ಉಳಿದಿರುವುದು ಸಂಗೀತ ಕ್ಷೇತ್ರದಲ್ಲಿ ಮಾತ್ರ ಎಂದು ಬೆಂಗಳೂರಿನ ಡಾ.ಪಂಡಿತ್ ರಾಜಗೋಪಾಲ ಕಲ್ಲೂರಕರ್ ಅಭಿಪ್ರಾಯಪಟ್ಟರು.
ಶ್ರೀಗುರು ಪುಟ್ಟರಾಜ ಸಂಗೀತ ಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಂಡಿತ್ ಕೆ.ಎಸ್.ಹಡಪದ ಸ್ಮರಣಾರ್ಥ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ 2022ನೇ ಸಾಲಿನ ಪಂ.ಕೆ.ಎಸ್.ಹಡಪದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರಾಚೀನ ಪರಂಪರೆ ಹೊಂದಿರುವ ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಬಾಂಧವ್ಯ ನಡೆದು ಬಂದಿದೆ. ಆದರೆ ಆಧುನೀಕ ಶಿಕ್ಷಣ ವ್ಯವಸ್ಥೆಯಿಂದ ಗುರು-ಶಿಷ್ಯ ಎನ್ನುವ ಬಾಂಧವ್ಯ ಮಹತ್ವ ಕಳೆದುಕೊಳ್ಳುತ್ತಿದೆ. ಆದರೆ ಸಂಗೀತ ಕ್ಷೇತ್ರದಲ್ಲಿ ಮಾತ್ರ ಈಗಲೂ ಗುರು-ಶಿಷ್ಯ ಪರಂಪರೆ ಉಳಿದು, ಬೆಳೆದು ಬರುತ್ತಿದೆ ಎಂದು ಹೇಳಿದರು
ತಬಲ ವಾದ್ಯವನ್ನು ಪಕ್ಕ ವಾದ್ಯ ಎಂದು ಪರಿಗಣಿಸಿ ಅಷ್ಟು ಮಹತ್ವ ನೀಡುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಜಾಕೀರ್ ಹುಸೇನ್ ಅವರು ತಬಲವನ್ನು ಸೋಲೋವನ್ನಾಗಿ ಬಾರಿಸಿ ಅದಕ್ಕೆ ಘನತೆ ತಂದುಕೊಟ್ಟರು. ಈಗ ತಬಲಕ್ಕೂ ತನ್ನದೇ ಅದ ಛಾಪು ಮೂಡಿದ್ದು, ಅನೇಕರು ಆಸಕ್ತಿ ವಹಿಸಿ ಕಲಿಯುತ್ತಿದ್ದಾರೆ ಎಂದರು.
ಬಳ್ಳಾರಿಯ ವಿಜಯವಾಣಿ, ದಿಗ್ವಿಜಯ ವಾಹಿನಿ ಜಾಹೀರಾತು ವಿಭಾಗದ ಗುರುರಾಜ ಎನ್.ಹಸರಗುಂಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತ ಸಭಾ ಗೌರವಾಧ್ಯಕ್ಷರಾದ ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲರ್ ಎ.ಎಸ್.ಪ್ರಸನ್ನಕುಮಾರ್, ಸಂಗೀತಸಭಾ ಅಧ್ಯಕ್ಷ ಭೀಮಾಶಂಕರ ಬಿದನೂರ ಇದ್ದರು.
ಬಳಿಕ ಸಭಾದ ವಿದ್ಯಾರ್ಥಿಗಳು ತಬಲ ಪ್ರತಿಭಾ ಪ್ರದರ್ಶನ, ಡಾ.ಪಂ. ರಾಜಗೋಪಾಲ ಕಲ್ಲೂರಕರ್, ರೂಪಕ್ ಕಲ್ಲೂರಕರ್ ಅವರಿಂದ ಜುಗಲ ತಬಲ ದ್ವಂದ್ವ ವಾದನ ಪ್ರಸ್ತುತ ಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net