

ಮದ್ದೂರು: ಡಾ.ಬಾಬು ಜಗಜೀವನ್‌ರಾಮ್ ಅವರ ಆಶಯಗಳು ಮತ್ತು ಜೀವನ ಮೌಲ್ಯಗಳು ಭೂಮಂಡಲ ಇರುವವರೆಗೂ ಜೀವಂತವಾಗಿರುತ್ತವೆ ಎಂದು ತಹಸೀಲ್ದಾರ್ ಟಿ.ಎನ್. ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಜಗಜೀವನ್ ರಾಮ್ ಅವರ 116ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಅವರು ಮಾತನಾಡಿದರು.
ಬಾಬು ಜಗಜೀವನ್ ರಾಮ್ ಅವರು ಶೋಷಿತರ, ದಮನಿತರ ಧ್ವನಿಯಾಗಿದ್ದರು. ಉಪಪ್ರಧಾನಿಯಾಗಿದ್ದಾಗ ರಾಷ್ಟ್ರವೇ ಮೆಚ್ಚುವ ಆಡಳಿತ ನೀಡಿ ಮಾದರಿಯಾಗಿದ್ದರು. ಪ್ರಸ್ತುತ ದಿನಗಳಲ್ಲಿ ಮಹನೀಯರ ಆಶಯಗಳು ಕಣ್ಮರೆಯಾಗುತ್ತಿವೆ. ಆಧುನಿಕ ಸಮಾಜದಲ್ಲಿ ನಾಗರಿಕರು ಮತ್ತು ಯುವಕರು ಮಹನೀಯರ ಆಶೋತ್ತರಗಳನ್ನು ಈಡೇರಿಸುವ ಕೈಂಕರ್ಯ ಮಾಡಬೇಕಾಗಿದೆ ಎಂದರು.
ದಲಿತ ಮುಖಂಡ ಮರಳಿಗ ಶಿವರಾಜು ಅವರು ಪ್ರಧಾನ ಭಾಷಣ ಮಾಡಿದರು. ತಾಪಂ ಇಒ ಎಲ್. ಸಂದೀಪ್, ಬಿಇಒ ಸಿ.ಎಚ್. ಕಾಳಿರಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರವೀಣ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಪ್ರಕಾಶ್ ಕೊರ್ಜಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ನಾಗಲಕ್ಷ್ಮೀ, ಪುರಸಭೆ ಮುಖ್ಯಾಧಿಕಾರಿ ಎಸ್.ಅಶೋಕ್ ಇದ್ದರು.