

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ನಗರ ಘಟಕದ ವತಿಯಿಂದ ಸಾಹಿತಿ, ಪ್ರಾಂಶುಪಾಲ ಡಾ.ಚಂದ್ರಶೇಖರಯ್ಯ, ಮಳವಳ್ಳಿಯ ಸಾಹಿತಿ ಮಲ್ಲಿಕಾ ಮಳವಳ್ಳಿ ಅವರಿಗೆ ‘ಶಕುಂತಲ ಜಯದೇವ ಶರಣ ಪ್ರಶಸ್ತಿ-2022’ ಪ್ರದಾನ ಮಾಡಲಾಯಿತು.
ಜೆಎಸ್‌ಎಸ್ ಆಸ್ಪತ್ರೆಯ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಮಾತನಾಡಿ, ಮಲ್ಲಿಕಾ ಅವರು ಓದಿನ ಹಂಬಲದಿಂದ ತಮ್ಮ 58ನೇ ವಯಸ್ಸಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಆಧ್ಯಾತ್ಮಿಕ ಒಲವುಳ್ಳ ಇವರು ಬಸವ ಸ್ಮರಣೆ(ಆಧುನಿಕ ವಚನಗಳು), ಮಹದೇಶ್ವರ ಭಕ್ತಿಗೀತೆ, ಶ್ರೀ ಸಿದ್ಧಗಂಗೆ ಶಿವಯೋಗಿ, ಶ್ರೀರಾಜೇಂದ್ರ ಶಿವಯೋಗಿ, ಹೃದಯಗೀತೆ, ಪ್ರಕೃತಿಮಾತೆ ಕವನ ಸಂಕಲವನ್ನು ರಚಿಸಿದ್ದು, ಜತೆಗೆ, ಕಾತ್ಯಾಯಿನಿ, ಹೆಣ್ಣು ಸಂಕೀರ್ತನ ಬದುಕಿಗೊಂದು ಆಸರೆ ಎಂಬ ಕಾದಂಬರಿಯನ್ನು ರಚಿಸಿದ್ದಾರೆ ಎಂದರು.
ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಡಾ.ಚಂದ್ರಶೇಖರಯ್ಯ ಅವರು ಸೃಜನಶೀಲ ಬರಹಗಾರರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 47ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಕಥೆ, ಕವನ, ನಾಟಕ, ಜೀವನಚರಿತ್ರೆ, ಕಾದಂಬರಿ, ಮಕ್ಕಳ ಸಾಹಿತ್ಯ ಅನುವಾದ ಸಂಶೋಧನಾ ಗ್ರಂಥ, ಸಂಪಾದನಾ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಆದಿವಾಸಿ ಸೋಲಿಗರ ಕುರಿತು ‘ಕಾರಾಮಕ್ಕ’, ಶರಣ ಕೇಂದ್ರಿತ ಚಳವಳಿ ಕುರಿತ ‘ಜಗದನಂಟ’ ಎಂಬ ಸಂಶೋಧನಾ ಕಾದಂಬರಿ ರಚಿಸಿದ್ದಾರೆ ಎಂದರು.
ಪರಿಷತ್ನ್ ಅಧ್ಯಕ್ಷ ಅಪ್ಪರಾವ್ ಅಕ್ಕೋಣೆ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಗೌಡ ಎರೇಸೀಮಿ, ಜಿಲ್ಲಾಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ನಗರಾಧ್ಯಕ್ಷ ಮ.ಗು.ಸದಾನಂದಯ್ಯ ಇನ್ನಿತರರು ಇದ್ದರು.