ಡಾ.ಎಚ್.ಸಿ.ಮಹದೇವಪ್ಪಗೆ ಜಿಲ್ಲಾ ಉಸ್ತುವಾರಿ ಹೊಣೆ

H-C-Mahadevappa
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ.ಮಹದೇವಪ್ಪ ನೇಮಕಗೊಂಡಿದ್ದಾರೆ. ಜಿಲ್ಲೆಯ ಮತ್ತೊಬ್ಬ ಸಚಿವ ಕೆ.ವೆಂಕಟೇಶ್ ಚಾಮರಾಜನಗರ ಜಿಲ್ಲೆಯ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದಾರೆ.

ತಿ.ನರಸೀಪುರ ಶಾಸಕರೂ, ಸಮಾಜ ಕಲ್ಯಾಣ ಸಚಿವರೂ ಆಗಿರುವ ಡಾ.ಮಹದೇವಪ್ಪ ಅವರಿಗೆ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮೈಸೂರು ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ಒಲಿದಿತ್ತು. ಕೊಡಗು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಇದೀಗ ಮತ್ತೆ ಮೈಸೂರು ಜಿಲ್ಲೆಯ ಉಸ್ತುವಾರಿ ದೊರೆತಿದೆ.

2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸಪ್ರಸಾದ್ ಮೊದಲಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ನಂತರ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಪರಿಣಾಮ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡರು. ಬಳಿಕ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ನಿಯೋಜಿಸಲಾಗಿತ್ತು.

2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ.ದೇವೇಗೌಡ ಜಿಲ್ಲಾ ಉಸ್ತುವಾರಿ ಆಗಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಾಗ ಸ್ಥಳೀಯರಿಗೆ ಸಚಿವರಾಗುವ ಅವಕಾಶ ಸಿಗಲಿಲ್ಲ. ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ವಿ.ಸೋಮಣ್ಣ ಕೆಲ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರ ಬಳಿಕ ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್ ಉಸ್ತುವಾರಿ ಹೊಣೆಗಾರಿಕೆ ಅಲಂಕರಿಸಿದ್ದರು. ಸ್ಥಳೀಯ ಕೆ.ಆರ್. ಕ್ಷೇತ್ರದ ಹಿರಿಯ ಶಾಸಕರಾಗಿದ್ದ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೀಗ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಸ್ಥಳೀಯರಿಗೆ ಜಿಲ್ಲಾ ಉಸ್ತುವಾರಿ ದೊರೆತಿದೆ. ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಜಿಲ್ಲೆಯ ಸಮಸ್ಯೆಗಳು, ಆಗು-ಹೋಗುಗಳು ಸ್ಥಳೀಯರಾದ ಡಾ.ಮಹದೇವಪ್ಪ ಅವರಿಗೆ ತಿಳಿದಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ.

ಕೊಡಗು ಬಿಟ್ಟು ಚಾ.ನಗರಕ್ಕೆ:
ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಪಶುಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ನೀಡಬೇಕೆಂಬ ಒತ್ತಾಯ ವ್ಯಕ್ತವಾಗಿತ್ತು. ತವರು ಕ್ಷೇತ್ರ ಪಿರಿಯಾಪಟ್ಟಣಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಉಸ್ತುವಾರಿ ಸಿಗಬಹುದು ಎಂಬ ಚರ್ಚೆ ನಡೆದಿತ್ತು. ಆದರೀಗ ಮೈಸೂರು, ಕೊಡಗು ಜಿಲ್ಲೆಗಳೆರಡನ್ನೂ ಬಿಟ್ಟು ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿ ನಿಯೋಜಿಸಲಾಗಿದೆ. ಎನ್.ಎಸ್.ಭೋಜರಾಜು ಅವರನ್ನು ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net