

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ ಗುರುವಾರ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಆಯುಕ್ತರಾಗಿದ್ದ ಜಯಶ್ರೀ ಶಿಂತ್ರಿ ಅವರನ್ನು ಸರ್ಕಾರ ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ವರ್ಗಾವಣೆ ಮಾಡಿತ್ತು.
ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಯಾಗಿರುವ ಡಾ. ಈಶ್ವರ ಉಳ್ಳಾಗಡ್ಡಿ ಇದಕ್ಕೂ ಮೊದಲು ಬೀದರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿದ್ದರು. ಅವರನ್ನು ಶಾಲಾ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇದಕ್ಕೂ ಮೊದಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಹುದ್ದೆ ನಿರ್ವಹಿಸಿದ್ದಾರೆ. ಇ- ಆಸ್ತಿ ಅಭಿಯಾನ, ಪಾಲಿಕೆ ಆದಾಯ ಹೆಚ್ಚಳಕ್ಕೆ ಆಸ್ತಿಗಳ ಜಿಪಿಎಸ್ ಸರ್ವೇ, ಲಕ್ಷ ವೃಕ್ಷ ಆಂದೋಲನ ಆಯೋಜನೆ ಮತ್ತು 100 ಕೋಟಿ ರೂಪಾಯಿ ಆಸ್ತಿ ಕರ ಸಂಗ್ರಹಣೆ ಹೊಸ ದಾಖಲೆ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.