ಡಾ.ಅಂಬೇಡ್ಕರ್ ಒಂದು ಜಾತಿಗೆ ಸೀಮಿತರಲ್ಲ

Oplus_16908290
ಹುಮನಾಬಾದ್‌ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಉತ್ಸವವನ್ನು ಭಂತೆ ಧಮ್ಮಾನಂದ ಉದ್ಘಾಟಿಸಿದರು. ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಬಸವರಾಜ ಆರ್ಯ, ಲಕ್ಷ್ಮಣರಾವ ಬುಳ್ಳಾ ಇತರರಿದ್ದರು.
Published on

ಹುಮನಾಬಾದ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ ದೇಶದ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಾಬಾಸಾಹೇಬರ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇಡೀ ಜಗತ್ತು ಅವರ ಬಗ್ಗೆ ಅಪಾರ ಗೌರವ ಹೊಂದಿದೆ. ಅವರು ರಚಿಸಿದ ಸಂವಿಧಾನದಿಂದಾಗಿ ಎಲ್ಲರಿಗೂ ಸಮಾನತೆ ಸಿಗುವಂತಾಗಿದ್ದು, ಎಲ್ಲರೂ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಧ್ವಜಾರೋಹಣ ನೆರವೇರಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಅಂಬೇಡ್ಕರ್ ನೀಡಿರುವ ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳನ್ನು ಜೀವನದಲ್ಲಿ ಅನುಸರಿಸುವ ಅಗತ್ಯವಿದೆ ಎಂದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನಕ್ಕೆ ಮೂರು ಕೋಟಿ ಅನುದಾನ ಒದಗಿಸಿದ್ದು, ಇನ್ನೂ ಬೇಕಿದ್ದರೆ ಒಂದು ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು. ಡಾ.ಬಾಬು ಜಗಜೀವನರಾಂ ಮೂರ್ತಿಗಾಗಿ ಪುರಸಭೆಯಿಂದ ೧೮ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೈಲಹೊಂಗಲದ ಶ್ರೀ ನಿಜಗುಣಾನಂದ ಸ್ವಾಮೀಜಿ, ಆಣದೂರ ಬುದ್ಧವಿಹಾರದ ಭಂತೆ ಧಮ್ಮಾನಂದ ಮಾತನಾಡಿದರು. ಬೌದ್ಧ ಧರ್ಮ ಪ್ರಚಾರಕ ಧರ್ಮರಾಯ ಘಾಂಗ್ರೆ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಮಾಜಿ ಸಂಸದ ಭಗವಂತ ಖೂಬಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಪುರಸಭೆ ಅಧ್ಯಕ್ಷೆ ಪಾರ್ವತಿಬಾಯಿ ಶೇರಿಕಾರ, ಉಪಾಧ್ಯಕ್ಷ ಮುಕ್ರಂಜಾ, ಸಮಿತಿ ಗೌರವಾಧ್ಯಕ್ಷ ಬಸವರಾಜ ಆರ್ಯ, ಅಧ್ಯಕ್ಷ ಶ್ರೀಧರ ಹಿರೇಮನಿ, ಪ್ರಮುಖರಾದ ಲಕ್ಮಣರಾವ ಬುಳ್ಳಾ, ಕೆ.ಎಂ. ಗಜೇಂದ್ರ, ಅಫ್ಸರಮಿಯಾ, ಓಂಪ್ರಕಾಶ ಆರ್ಯ, ಸುರೇಶ ಘಾಂಗ್ರೆ ಇತರರಿದ್ದರು.

ಸಮಿತಿ ಗೌರವಾಧ್ಯಕ್ಷ ಲಕ್ಷ್ಮೀಪುತ್ರ ಮಾಳಗೆ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬ ಪ್ರತಿಮೆಗೆ ಮುಖಂಡರು, ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಡಾ.ಅಂಬೇಡ್ಕರ್ ಕನಸು ನನಸಾಗಿಸಲು ಪ್ರತಿಯೊಬ್ಬರೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಏ.೧೪ ಎಲ್ಲರಿಗೂ ಪವಿತ್ರವಾದ ದಿನ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಾಬಾ ಸಾಹೇಬರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ.

| ಡಾ.ಸಿದ್ದಲಿಂಗಪ್ಪ ಪಾಟೀಲ್

ಶಾಸಕ

ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆ ಸಿಗುವಂತೆ ಮಾಡಿದ್ದು ಡಾ.ಅಂಬೇಡ್ಕರ್. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ಪ್ರತಿಯೊಬ್ಬರೂ ಕಡ್ಡಾಯ ಶಿಕ್ಷಣ ಪಡೆಯಬೇಕೆಂದು ಹೇಳಿದ್ದಾರೆ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು.

| ರಾಜಶೇಖರ ಪಾಟೀಲ್

ಮಾಜಿ ಸಚಿವ

ಆರೋಪ-ಪ್ರತ್ಯಾರೋಪಗಳಿಂದ ಕೆಲಕಾಲ ಗೊಂದಲ: ಜಯಂತ್ಯುತ್ಸವದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಆರೋಪ-ಪ್ರತ್ಯಾರೋಪದಿಂದ ಕೆಲಕಾಲ ಗೊಂದಲ ಉಂಟಾಯಿತು. ಅಂಬೇಡ್ಕರ್ ಜೀವತಾವಧಿಯಲ್ಲಿ ಕಾಂಗ್ರೆಸ್ ಭಾರತ ರತ್ನನೀಡಲಿಲ್ಲ. ದೇಶದಲ್ಲಿ ಬಿಜೆಪಿ ಬೆಂಬಲಿತ ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಭಾರತ ರತ್ನ ನೀಡಲಾಯಿತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಿಕ ಬಾಬಾಸಾಹೇಬರ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿತು ಎಂದು ಶಾಸಕ ಪಾಟೀಲ್ ಹೇಳಿದರು. ನಂತರ ಮಾತನಾಡಿದ ಮಾಜಿ ಸಚಿವ ರಾಜಶೇಖರ, ಸಂವಿಧಾನ ಬದಲಾಯಿಸಲು ಮುಂದಾಗಿದ್ದು ಬಿಜೆಪಿ ಎಂದಾಗ ಕೆಲಕಾಲ ಗದ್ದಲ ಏರ್ಪಟ್ಟಿತ್ತು. ಪೂಜ್ಯರು, ಆಯೋಜಕರು ಮಧ್ಯಪ್ರವೇಶಿಸಿ ಇಂಥ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ರಾಜಕೀಯ ಹೇಳಿಕೆಗಳನ್ನು ನಿಮ್ಮ ನಿಮ್ಮ ಪಕ್ಷದ ಕಾರ್ಯಕ್ರಮದಲ್ಲಿ ನೀಡಬಹುದು ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದ ನಂತರ ವಾತಾವಾರಣ ತಿಳಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net