ಡಯಾಲಿಸಿಸ್ ಕೇಂದ್ರದಲ್ಲಿ ‘ಔಷಧ’ ಎಡವಟ್ಟು

Dialysis
ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳು.
Published on

ಸೋಮವಾರಪೇಟೆ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಡಯಾಲಿಸಿಸ್‌ಗೆ ನಿತ್ಯ ಬಳಸುತ್ತಿದ್ದ ಔಷಧ ಬದಲಾಯಿಸಿ ನೀಡಿರುವುದರಿಂದ ಕಳೆದ ಒಂದು ವಾರದಿಂದ ರೋಗಿಗಳು ಪರದಾಡುವಂತಾಗಿದ್ದು ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರ ಸೇರಿದಂತೆ ರಾಜ್ಯದ 167 ಡಯಾಲಿಸಿಸ್ ಕೇಂದ್ರದ ನಿರ್ವಹಣೆಯನ್ನು ಗುತ್ತಿಗೆ ಪಡೆದುಕೊಂಡಿರುವ ಕೋಲ್ಕತ್ತಾ ಮೂಲದ ಸಂಜೀವಿನಿ ಸಂಸ್ಥೆಯು ಕಳೆದ ಶುಕ್ರವಾರದಿಂದ ಡಯಾಲಿಸಿಸ್‌ಗೆ ಬಳಸುವ ಔಷಧವನ್ನು ಬದಲಿಸಿ ಬೇರೆಯ ಔಷಧವನ್ನು ವಿತರಿಸಿದ್ದರಿಂದ ನಾಲ್ಕು ಗಂಟೆ ಡಯಾಲಿಸಿಸ್ ಮಾಡಿಸಿಕೊಳ್ಳಲು ರೋಗಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದೂವರೆ ಗಂಟೆಗಳ ಚಿಕಿತ್ಸೆ ಆಗುವಾಗಲೇ ಕೈ, ಕಾಲು ನೋವು, ನಡುಕ, ತಲೆಸುತ್ತುವಿಕೆ ಆಗುತ್ತಿದೆ ಎಂದು ರೋಗಿಗಳು ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದ್ರೋಗಿ ಕುಶಾಲನಗರದ ಮಣಿ ಅವರು ಸಂಕಟಪಟ್ಟಿದ್ದಾರೆ. ಮತ್ತೊಬ್ಬ ರೋಗಿ ಯಡವಾರೆಯ ಒ.ಆರ್.ಶಶಿ ಅವರಿಗೆ ಸಮಸ್ಯೆ ಉಲ್ಬಣಿಸಿದ್ದು ಗುರುವಾರ ಸುಳ್ಯದ ಕೆವಿಜಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾಗಿರುವ ಕುರಿತು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಮೂರು ವರ್ಷಗಳಿಂದ ಡಯಾಲಿಸಿಸ್‌ಗೆ ಒಯಸಿಸ್ ಕಂಪನಿಯ ಆಸಿಡ್ ಮತ್ತು ಬೈಕಾರ್ಬನ್ ಪಾರ್ಟ್ ಎ ಮತ್ತು ಪಾರ್ಟ್ ಬಿ ಔಷಧವನ್ನು ಬಳಸಲಾಗುತ್ತಿತ್ತು. ಆ ಔಷಧದಲ್ಲಿ ನಾಲ್ಕು ಗಂಟೆಗಳ ಚಿಕಿತ್ಸೆ ನಡೆದು ರೋಗಿಗಳಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಕಳೆದ ಶುಕ್ರವಾರದಿಂದ ನೆಫ್ರೋಕ್ಸಾ ಪೌಡರ್ ಉಪಯೋಗಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ರೋಗಿಗಳು ವಿಜಯವಾಣಿ ಜತೆ ಅಳಲು ತೋಡಿಕೊಂಡರು.

ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ 30 ಕಿಡ್ನಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟು ಶಕ್ತರಲ್ಲದ್ದರಿಂದ ರೋಗಿಗಳ ಸ್ಥಿತಿ ಈಗ ಚಿಂತಾಜನಕವಾಗಿದೆ.

ಮೂರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕುಶಾಲನಗರದ ಸುಂದರನಗರದ ನಿವಾಸಿ ಮಣಿ ಅವರಿಗೆ ಹೃದಯ ಸಂಬಂಧಿ ಕಾಯಿಲೆಯಿರುವುದರಿಂದ ಅವರ ಆರೋಗ್ಯ ಹದಗೆಟ್ಟಿದೆ. ಗುರುವಾರ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಕುಟುಂಬಸ್ಥರನ್ನು ಆತಂಕಕ್ಕೀಡು ಮಾಡಿದೆ. ಪೂರ್ಣ ಪ್ರಮಾಣದಲ್ಲಿ ನಾಲ್ಕು ಗಂಟೆಗಳ ಕಾಲ ಸಮರ್ಪಕವಾಗಿ ಡಯಾಲಿಸಿಸ್ ಮಾಡಲು ಸಾಧ್ಯವಾಗದ ಹಿನ್ನ್ನೆಲೆಯಲ್ಲಿ ಮೂತ್ರ ವಿಸರ್ಜನೆಗೆ ತೊಂದರೆಯಾಗಿದೆ ಎಂದು ರೋಗಿಯ ಪತ್ನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net