ಡಯಟ್‌ದಲ್ಲಿ ವಿದ್ಯುತ್ ಗ್ರಿಡ್ ಬೇಡ: ಸಚಿವರ ಸೂಚನೆ

02983654-aa69-4e0d-83ea-aba5536f76e9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಈಗಿನ ಡಯಟ್) ಆವರಣದಲ್ಲಿ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆ ಕೈಬಿಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಬರೆದಿದ್ದ ಪತ್ರ ಆಧರಿಸಿ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಗತ್ಯ ಕ್ರಮಕೈಕೊಳ್ಳಲು ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿ ಇತ್ತೀಚೆಗೆ ಪತ್ರ ಬರೆದಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ: 09 ಯೋಸಕ 2009 ದಿನಾಂಕ: 19-03-2009ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆ ಸ್ಥಳ, ನಿವೇಶ, ಜಮೀನು ಮತ್ತು ಕಟ್ಟಡಗಳನ್ನು ಸರ್ಕಾರಿ ಸ್ವಾಮ್ಯದ ಅನ್ಯ ಇಲಾಖೆಗಳಿಗೆ ಮತ್ತು ಖಾಸಗಿ ಸ್ವಾಮ್ಯದ ಯಾವುದೇ ಸಂಘ-ಸಂಸ್ಥೆಗಳಿಗೆ ಹಸ್ತಾಂತರ ಮಾಡಲು ಅವಕಾಶ ಇಲ್ಲದಿರುವ ಕುರಿತು ಬಸವರಾಜ ಹೊರಟ್ಟಿ ಅವರ ವಿಚಾರವನ್ನು ಶಿಕ್ಷಣ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಯಟ್ ಆವರಣದಲ್ಲಿ ಪ್ರಾಥಮಿಕ ಶಾಲೆ ಇದ್ದು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಹಾಗೂ ಡಯಟ್ ಆವರಣದ ಸಾಗವಾನಿ ಮರಗಳ ಹಾನಿಯನ್ನು ತಪ್ಪಿಸಲು ಗ್ರಿಡ್ ಸ್ಥಾಪನೆ ವಿಚಾರ ಕೈಬಿಟ್ಟು, ಈ ಕುರಿತು ಸರ್ಕಾರದ ಮೂಲಕ ಅಗತ್ಯ ಆದೇಶ ಮಾಡಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಸಚಿವರು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಡಯಟ್ ಆವರಣದಲ್ಲಿ ಕೆಇಬಿ ಗ್ರಿಡ್ ಸ್ಥಾಪನೆ ಕೈಬಿಡುವಂತೆ ಶಾಶ್ವತ ಆದೇಶ ಹೊರಡಿಸಲು ಶಾಲಾ ಶಿಕ್ಷಣ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದ ಸಚಿವರ ಕ್ರಮ ಮತ್ತು ಬಸವರಾಜ ಹೊರಟ್ಟಿ ಪ್ರಯತ್ನವನ್ನು ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net