

ವಿಜಯವಾಣಿ ಸುದ್ದಿಜಾಲ ಧಾರವಾಡ
ದಕ್ಷಿಣ ಭಾರತದಲ್ಲೇ ಪ್ರಥಮ ಕನ್ನಡ ಶಿಕ್ಷಕರ ತರಬೇತಿ ಕೇಂದ್ರವಾದ, ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಆವರಣದಲ್ಲಿ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆ ಕೈಬಿಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಪತ್ರ ಬರೆದಿದ್ದಾರೆ.
1856ರಲ್ಲೇ ಆರಂಭವಾದ ಡಯಟ್ ಸಂಸ್ಥೆ ಕನ್ನಡ ಭಾಷೆ, ನುಡಿ, ನೆಲ, ಸಾಹಿತ್ಯ ಮತ್ತು ಶಿಕ್ಷಣವನ್ನು ಅಭಿವೃದ್ಧಿಗೊಳಿಸಿದೆ. ತರಬೇತಿ ನೀಡಿಕೆ, ಕಲಿಕಾ ಸಂಶೋಧನೆ, ಪಠ್ಯಕ್ರಮ ಸಾಹಿತ್ಯ ರಚನೆ, ಪಠ್ಯವಸ್ತು ನಿರ್ವಹಣೆ ಮತ್ತು ಅನುಷ್ಠಾನ, ಜಿಲ್ಲೆಯ ಕಲಿಕಾ ಚಟುವಟಿಕೆಗಳ ವಾರ್ಷಿಕ ಯೋಜನೆ ತಯಾರಿಕೆ, ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿ ಅನೇಕ ಮಹತ್ವದ ಕೆಲಸಗಳು ಡಯಟ್‌ನಿಂದ ನಡೆಯುತ್ತಿವೆ. ಸುಮಾರು 167ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಕಟ್ಟಡಗಳ ತಾಣವಾಗಿರುವ ಡಯಟ್ ಆವರಣದಲ್ಲಿ ಹುಬ್ಬಳ್ಳಿಯ ಹೆಸ್ಕಾಂ ಮೂಲಕ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಕೈ ಬಿಡುವಂತೆ ಸೂಚಿಸಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ: 9 ಯೋಸಕ 2009 ದಿ. 19-03-2009ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆ ಸ್ಥಳ, ನಿವೇಶ, ಜಮೀನು ಮತ್ತು ಕಟ್ಟಡಗಳನ್ನು ಸರ್ಕಾರಿ ಸ್ವಾಮ್ಯದ ಅನ್ಯ ಇಲಾಖೆಗಳಿಗೆ ನೀಡಲು ಮತ್ತು ಹಸ್ತಾಂತರ ಮಾಡಲು ಅವಕಾಶ ಇಲ್ಲದ ವಿಷಯವನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಯಟ್ ಆವರಣದಲ್ಲಿ ನಿರಂತರ ಶಿಕ್ಷಕರ ತರಬೇತಿ ನಡೆಯುವುದರಿಂದ ಹಾಗೂ ಇಲ್ಲಿ ಪ್ರಾಥಮಿಕ ಶಾಲೆ ಇದ್ದು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆ ವಿಚಾರ ಕೈಬಿಡಲು ಹಾಗೂ ಧಾರವಾಡದ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಡಯಟ್ ಆವರಣದ ಕೊಠಡಿಗಳನ್ನು ಹಸ್ತಾಂತರ ಮಾಡದಂತೆ ಹೊರಟ್ಟಿ ಡಿಸಿಗೆ ಸೂಚನೆ ನೀಡಿದ್ದಾರೆ.