

ತುಮಕೂರು : 2022ರ ಜ.1ನೇ ತಾರೀಖನ್ನು ಜಿಲ್ಲೆಯಲ್ಲಿ ಅರ್ಹತಾ ದಿನವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಡಬಲ್ ಎಂಟ್ರಿಗೆ ಅವಕಾಶ ನೀಡದೆ ಪಟ್ಟಿ ಸಿದ್ಧಪಡಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗಡಿ ಭಾಗದ ತಾಲೂಕುಗಳಲ್ಲಿ ಮತದಾರರು ಎರಡೂ ಕಡೆ ನೋಂದಣಿ ಮಾಡಿಕೊಳ್ಳುವ ಸಂಭವವಿದೆ. ಇಂತಹ ಪ್ರಕರಣಗಳಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ವಿಶೇಷ ಗಮನಹರಿಸಿ ಪಟ್ಟಿ ಸಿದ್ಧಪಡಿಸಬೇಕು ಎಂದರು.
ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಕಲರ್ ಪಿವಿಸಿ ಎಪಿಕ್ ಕಾರ್ಡ್‌ಗಳ ವಿತರಣೆಗೆ ಕ್ರಮಕೈಗೊಳ್ಳಬೇಕು, ಮತದಾರರ ಪಟ್ಟಿಗಳಲ್ಲಿನ ಫೋಟೋಗಳ ಮುದ್ರಣದ ಗುಣಮಟ್ಟ ಪರಿಶೀಲಿಸಬೇಕು. ಆಯಾ ಉಪವಿಭಾಗ, ತಾಲೂಕು ವ್ಯಾಪ್ತಿಯ ವಿವಿಧ ಕಾಲೇಜು ಮುಖ್ಯಸ್ಥರ ಸಭೆ ಕರೆದು ವೋಟರ್ ಹೆಲ್ಪ್ ಲೈನ್ ಆ್ಯಪ್ ಬಗ್ಗೆ ಯುವಕರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನ.8 ರಿಂದ ಡಿ.8ರವರೆಗಿನ ಅವಧಿಯಲ್ಲಿ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಯನ್ನು ನಿಗದಿತ ಕಾಲಮಿತಿಯೊಳಗೆ ನಿಯಮಾನುಸಾರ ವಿಲೇವಾರಿ ಮಾಡಿ 2022ರ ಜ.13ರಂದು ದೋಷರಹಿತ ಅಂತಿಮ ಮತದಾರರ ಪಟ್ಟಿ ಪ್ರಚಾರಪಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗೆ ಸೂಚಿಸಿದರು.
ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ವಿಲೇ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ನಮೂನೆಗಳಲ್ಲಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಲ್ಲದೆ, ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 2016 ವಿಐಪಿ ಹಾಗೂ 26557 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿ ಭಾನುವಾರ ಆಯಾ ಮತಗಟ್ಟೆಗಳಲ್ಲಿ ಹಾಜರಿದ್ದು, ಮತದಾರರಿಂದ ದೂರುಗಳನ್ನು ಸ್ವೀಕರಿಸಿ ಶೀಘ್ರ ವಿಲೇವಾರಿ ಮಾಡಲು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿಗಳಾದ ವಿ.ಅಜಯ್, ದಿಗ್ವಿಜಯ್, ಸೋಮಪ್ಪ ಕಡಕೋಳ, ಚುನಾವಣಾ ತಹಸೀಲ್ದಾರ್ ಗೌರಮ್ಮ, ಚುನಾವಣಾ ಶಿರಸ್ತೇದಾರ್ ನಾಗಭೂಷಣ್ ಮತ್ತಿತರರು ಇದ್ದರು.