

ಬೇಲೂರು: ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲೂಕಿನ ಡನಾಯಕನಹಳ್ಳಿ ಗ್ರಾಮದ ಮಹಿಳೆಯರು ಮದಘಟ್ಟ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗುರುವಾರ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಇಒ ಸುನೀತಾ, ಗ್ರಾಮಸ್ಥರ ಮನವಿ ಆಲಿಸಿ ಮುಂದಿನ ಮೂರು ದಿನಗಳೊಳಗೆ ಕುಡಿಯುವ ನೀರನ್ನು ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಸಾಮಾಜಿಕ ಹೋರಾಟಗಾರ ನಾಗರಾಜ್ ಮಾತನಾಡಿ, ಕಳೆದ 3 ವರ್ಷದ ಹಿಂದೆ ಡನಾಯಕನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ತೆಗೆಸಿ, ವಿದ್ಯುತ್ ಸಂಪರ್ಕ ಸೇರಿದಂತೆ ಪೈಪ್‌ಲೈನ್ ಕೆಲಸಕ್ಕೆ ಇಲ್ಲಿನ ಅಭಿವೃದ್ಧಿ ಅಧಿಕಾರಿ ಸದಸ್ಯರೊಬ್ಬರಿಗೆ ಗುತ್ತಿಗೆ ನೀಡಿದ್ದರು. ಆದರೆ ವಿದ್ಯುತ್ ಸಂಪರ್ಕ ವಿಳಂಬವಾಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲದ ಕಾರಣ ಅನಿವಾರ್ಯವಾಗಿ ಆಶುದ್ಧವಾದ ನೀರು ಕುಡಿದು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗದ ಕಾರಣ ಮಹಿಳೆಯರೊಂದಿಗೆ ಖಾಲಿ ಕೊಡಗಳೊಂದಿಗೆ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸುತ್ತಿದ್ದೇವೆ. ನಮಗೆ ತಕ್ಷಣವೆ ಶುದ್ಧ ಕುಡಿಯುವ ನೀರು ಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ತಾಲೂಕು ಪಂಚಾಯಿತಿ ಇಒ ಸುನೀತಾ ಮಾತನಾಡಿ, ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ಈಗಾಗಲೇ ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ಇನ್ನೆರಡು ದಿನಗಳಲ್ಲಿ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕೊಡುವ ಭರವಸೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರ ಮೂಲ ಸಮಸ್ಯೆಗಳನ್ನು ಅರಿತು ತಕ್ಷಣವೇ ಸ್ಪಂದಿಸುವ ಕೆಲಸ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲು ತಿಳಿಸಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಡನಾಯಕನಹಳ್ಳಿ ಗ್ರಾಮಸ್ಥರಾದ ಶೋಭಾ, ಬಸವರಾಜ್, ನಾಗರತ್ನ, ವಿದ್ಯಾ, ಅಶ್ವಿನಿ, ಪುಷ್ಪ, ದರ್ಶನ್, ಪವಿತ್ರಾ ಮತ್ತಿತರರಿದ್ದರು.