

ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ. ಹಣವಿದೆ ಎಂದು ನಂಬಿ ಭರ್ಜರಿ ಪ್ಲಾೃನ್ ರೂಪಿಸಿ ಡಕಾಯಿತಿ ನಡೆಸಿದವರಿಗೆ ಸಿಕ್ಕಿದ್ದು 50 ಸಾವಿರ ರೂ. ಮಾತ್ರ. ಇದಾದ ಒಂದು ವಾರದೊಳಗೆ ಅವರೆಲ್ಲರೂ ಕಂಬಿ ಹಿಂದೆ ನಿಂತಿದ್ದಾರೆ. ಇದರೊಂದಿಗೆ ತೀರ್ಥಹಳ್ಳಿ ತಾಲೂಕು ಮಹಿಷಿಯ ಉತ್ತರಾದಿ ಮಠದಲ್ಲಿ ಏ.5ರಂದು ನಡೆದಿದ್ದ ಡಕಾಯಿತಿ ಪ್ರಕರಣ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಇನ್ನೇನಿದ್ದರೂ ನ್ಯಾಯಾಂಗ ಪ್ರಕ್ರಿಯೆಯಷ್ಟೇ ಬಾಕಿ.
ಬೆದರಿಸಿ ಮಠದಲ್ಲಿದ್ದ 50 ಸಾವಿರ ರೂ. ದೋಚಿದ ಪ್ರಕರಣದಲ್ಲಿ ಭಾಗಿಯಾಗಿರಬಹುದಾದ 21 ಜನರ ತಂಡದ ಪೈಕಿ 12 ಜನ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ 12 ಜನರಲ್ಲಿ ಕೆಲವರು ಶಿಕಾರಿಪುರದವರು. ಇನ್ನು ಕೆಲವರು ಆನಂದಪುರ, ಮತ್ತೆ ಕೆಲ ಮಂದಿ ಹೊಸನಗರದವರು. ಇವರೆಲ್ಲರೂ ಒಂದು ತಂಡವಾಗಿ ಮಹಿಷಿ ಮಠದಲ್ಲಿ ದರೋಡೆ ನಡೆಸಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.10ರಂದು ಆರೋಪಿಗಳ ಬಂಧನಕ್ಕೆ ತೆರಳಿದ ವೇಳೆ ಶಿಕಾರಿಪುರದ ಶ್ರೀನಿವಾಸ ಅಲಿಯಾಸ್ ಸೀನ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪೊಲೀಸರು ಆತ್ಮರಕ್ಷಣೆಗಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿತ್ತು. ಆತನೂ ಸೇರಿದಂತೆ ಒಟ್ಟು 12 ಜನರನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ 21 ಮಂದಿ ಭಾಗಿಯಾಗಿರಬಹುದೆಂಬ ಶಂಕೆಯಿದೆ. ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಠದಲ್ಲಿ 300 ಕೋಟಿ ರೂ. ಹಣವಿದೆ ಎಂದುಕೊಂಡು ಶ್ರೀನಿವಾಸ್ ಮತ್ತು ರಿಪ್ಪನ್‌ಪೇಟೆ ಪೃಥ್ವಿರಾಜ್ ಹಣ ದೋಚಲು ಸಂಚು ರೂಪಿಸಿದ್ದರು. ಎರಡ್ಮೂರು ಬಾರಿ ಇವರಿಬ್ಬರೂ ಮಹಿಷಿಗೆ ಬೈಕ್‌ನಲ್ಲಿ ಹೋಗಿ ಬಂದಿದ್ದರು. ಏ.5ರಂದು ರಾತ್ರಿ ಆರೋಪಿಗಳು ಮುಸುಕುಧಾರಿಗಳಾಗಿ ಮಠಕ್ಕೆ ತೆರಳಿ ಅಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕುಮಾರ ಆಚಾರ್ಯ ಮತ್ತು ಮಠದಲ್ಲಿದ್ದವರಿಗೆ 300 ಕೋಟಿ ರೂ. ನೀಡುವಂತೆ ಬೆದರಿಸಿದ್ದರು. ಮಠದಲ್ಲಿದ್ದ 50 ಸಾವಿರ ರೂ. ಮೊಬೈಲ್, ಸಿಸಿ ಕ್ಯಾಮರಾ ಡಿವಿಆರ್, ಲ್ಯಾಪ್‌ಟಾಪ್ ಕಿತ್ತುಕೊಂಡು ಪರಾರಿಯಾಗಿದ್ದರು. ಪತ್ತೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಕಾರಿಗಳಾದ ಅನಿಲ್‌ಕುಮಾರ್ ಭೂಮರೆಡ್ಡಿ , ಎ.ಜಿ. ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಬಂಧಿತರಿಂದ ವಶಕ್ಕೆ ಪಡೆದಿದ್ದೇನು?: ಕೃತ್ಯಕ್ಕೆ ಬಳಸಿದ ಸುಮಾರು 10 ಲಕ್ಷ ರೂ. ಮೌಲ್ಯದ ಟಿಟಿ ವಾಹನ, ಆರೋಪಿಗಳು ದರೋಡೆ ದಿನ ಬಳಸಿದ್ದ 4 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ಕಾರು.
ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಇನ್ನಿತರ ವಸ್ತುಗಳು.
ಬಂಧಿತರಿವರು : ಸುರೇಶ ಅಲಿಯಾಸ್ ನೇರಲೆ ಸುರೇಶ, ಸತೀಶ ಅಲಿಯಾಸ್ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ ಅಲಿಯಾಸ್ ಶ್ರೀಕಾಂತ, ಅಭಿಲಾಷ್ ಅಲಿಯಾಸ್ ಅಭಿ, ರಾಕೇಶ, ಭರತ ಅಲಿಯಾಸ್ ಚಿಟ್ಟೆ, ಪವನ ಅಲಿಯಾಸ್ ಗಿಡ್ಡ ಪವನ್, ರಮೇಶ್ ಅಲಿಯಾಸ್ ನವೀನ್, ನವೀನ್‌ಕುಮಾರ್ ಅಲಿಯಾಸ್ ಡೈಮಂಡ್ ನವೀನ್, ದರ್ಶನ್, ಆರ್.ಕರಿಸಬಸಪ್ಪ