ಠೇವಣಿ ಸಂಗ್ರಹದಲ್ಲಿ ಡಿಸಿಸಿ ಬ್ಯಾಂಕ್ ನೀರಸ ಸಾಧನೆ

24 SDLP 02
Published on

ಶಿಡ್ಲಘಟ್ಟ : ತಾಲೂಕಿನಾದ್ಯಂತ ರೈತರು ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳ ಸಾಲ ಮರುಪಾವತಿ ಉತ್ತಮವಾಗಿದೆ, ಆದರೆ ಠೇವಣಿ ಸಂಗ್ರಹದಲ್ಲಿ ಹಿಂದುಳಿದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ತಾಲೂಕಿನ ಎಸ್‌ಎಫ್‌ಸಿಎಸ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಈವರೆಗೂ ಸುಮಾರು 52 ಕೋಟಿ ರೂ. ಕೆಸಿಸಿ ಸಾಲ ವಿತರಿಸಲಾಗಿದೆಯಾದರೂ ರೈತರಿಂದ ಕೇವಲ 6 ಕೋಟಿ ರೂ. ಠೇವಣಿ ಮಾತ್ರ ಸಂಗ್ರಹವಾಗಿದೆ. ಸಹಕಾರ ಸಂಘಗಳ ಅಧ್ಯಕ್ಷರೂ ಸೇರಿ ಕಾರ್ಯದರ್ಶಿಗಳಿಗೆ ಸಾಲ ಕೊಡಿಸುವಲ್ಲಿ ಇರುವ ಬದ್ಧತೆ ಠೇವಣಿ ಸಂಗ್ರಹಿಸುವುದರಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಾದ್ಯಂತ ಸುಮಾರು 150 ಕೋಟಿ ರೂ. ಗೂ ಹೆಚ್ಚು ಸಾಲ ವಿತರಿಸಿದ್ದರೂ ಜನರು ಠೇವಣಿ ಇಡಲು ಮುಂದಾಗುತ್ತಿಲ್ಲ. ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಬೇಕು, ಠೇವಣಿ ಇಡಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೊರೆ ಹೋಗುವುದು ಶೋಭೆ ತರುವುದಿಲ್ಲ ಎಂದ ಗೋವಿಂದಗೌಡ, ಮಾರ್ಚ್ ಒಳಗೆ ಆಯಾ ಸಹಕಾರ ಸಂಘಗಳ ವ್ಯಾಪ್ತಿಯ ಎಂಪಿಸಿಎಸ್ ಸೊಸೈಟಿಗಳು ಸೇರಿ ನಾಗರಿಕರಿಂದ ಉಳಿತಾಯ ಖಾತೆಗಳನ್ನು ಮಾಡಿಸುವ ಮೂಲಕ 35 ಕೋಟಿ ರೂ. ಹಣ ಠೇವಣಿ ಸಂಗ್ರಹಿಸಿಲು ಆದ್ಯತೆ ನೀಡುವಂತೆ ಸೂಚಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ಅನಿಲ್‌ಕುಮಾರ್, ರಮೇಶ್, ಬ್ಯಾಂಕ್ ಮೇಲ್ವಿಚಾರಕ ಆನಂದ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net