ಠೇವಣಿ ಸಂಗ್ರಹಣೆಗಾಗಿ ಆಂದೋಲನ

5-klr-1 Alternative'
Published on

ಕೋಲಾರ: ಸಾಲಕ್ಕಾಗಿ ಡಿಸಿಸಿ ಬ್ಯಾಂಕ್ ಮೊರೆ ಹೋಗುವ ಜನರ ಮನವೊಲಿಸಿ ಉಳಿತಾಯದ ಹಣವನ್ನು ನಮ್ಮ ಬ್ಯಾಂಕಿನಲ್ಲಿ ಠೇವಣಿ ಇರಿಸಲು ದೊಟ್ಟ ಮಟ್ಟದ ಆಂದೋಲನ ರೂಪಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಡಿಸಿಸಿ ಬ್ಯಾಂಕಿನಲ್ಲಿ ಸೋಮವಾರ ನಡೆದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಮಾತನಾಡಿ, ನಮ್ಮ ಬ್ಯಾಂಕ್ ಸಾಲ ವಿತರಣೆ, ವಸೂಲಾತಿ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದೆಯಾದರೂ ಠೇವಣಿ ಸಂಗ್ರಹಣೆಗೆ ನಿಗದಿಪಡಿಸಿದ್ದ ಗುರಿ ತಲುಪುವಲ್ಲಿ ಹಿನ್ನಡೆ ಕಂಡಿರುವುದರಿಂದ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ಅಪಕೃಪೆಗೆ ಗುರಿಯಾಗುವಂತಾಗಿದೆ ಎಂದು ಬೇಸರಿಸಿದರು.

ಜನರಿಂದ ಠೇವಣಿ ಸಂಗ್ರಹಣೆಗೆ ನಿಯೋಜಿಸಿರುವ ಅಧಿಕಾರಿಗಳ ಸಾಧನೆ ತೃಪ್ತಿ ತಂದಿಲ್ಲ, ಗುರಿ ಸಾಧನೆ ಮಾಡದ ಅಧಿಕಾರಿಗಳನ್ನು ಬೇರೆ ಶಾಖೆಗಳಿಗೆ ವರ್ಗಾಯಿಸಿ ದಕ್ಷರನ್ನು ಠೇವಣಿ ಸಂಗ್ರಹಕ್ಕೆ ಬಳಸಿಕೊಳ್ಳಬೇಕು ಎಂದು ಬ್ಯಾಂಕ್ ಎಂಡಿ ರವಿಗೆ ಸೂಚಿಸಿದರು.

ನಿರ್ದೇಶಕರು ಕಾರ್ಯ ಕ್ಷೇತ್ರ ವ್ಯಾಪಿಯಲ್ಲಿ ಸಾಲ ಕೊಡಿಸಲು ತೋರುವ ಆಸಕ್ತಿಯನ್ನು ಠೇವಣಿ ಸಂಗ್ರಹಣೆ ಮಾಡುವತ್ತಲೂ ಗಮನಹರಿಸಬೇಕು. ಠೇವಣಿ ಇಡಲು ಜನರೇಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ ಅವರಲ್ಲಿನ ಸಂಶಯ, ಗೊಂದಲ ನಿವಾರಿಸಬೇಕು ಎಂದರು.

ಈ ವರ್ಷದ ಜೂನ್ ಅಂತ್ಯಕ್ಕೆ 328 ಕೋಟಿ ರೂ. ಠೇವಣಿ ಸಂಗ್ರಹಿಸಬೇಕಿತ್ತು. ಕೋವಿಡ್‌ನಿಂದ ಗುರಿ ಸಾಧಿಸಲಾಗಿಲ್ಲ ಎಂದು ಎಜಿಎಂ ಶಿವಕುಮಾರ್ ಮಾಹಿತಿ ನೀಡಿದಾಗ ಕುಪಿತರಾದ ಗೋವಿಂದಗೌಡ, ಅಧಿಕಾರಿಗಳು ಪ್ಯಾಕ್ಸ್‌ಗಳಲ್ಲಿ ಸಂಗ್ರಹಣೆಯಾಗಿರುವ ಠೇವಣಿಯನ್ನು ನಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ, ಸಾರ್ವಜನಿಕರು, ಉದ್ಯಮಿಗಳು, ವಾಣಿಜ್ಯೋದ್ಯಮಿಗಳಿಂದ ಠೇವಣಿ ಸಂಗ್ರಹಣೆಯಲ್ಲಿ ವಿಫಲರಾಗಿದ್ದು, ಮುಂದಿನ ವರ್ಷ ಮಾರ್ಚ್ ಅಂತ್ಯಕ್ಕೆ ಕನಿಷ್ಠ 600 ಕೋಟಿ ರೂ. ಸಂಗ್ರಹಣೆ ಮಾಡಲೇಬೇಕು ಎಂದರು.

ಬ್ಯಾಂಕ್ ಆರ್ಥಿಕ ಪ್ರಗತಿ ಹೆಚ್ಚಳಕ್ಕಾಗಿ ಭಾಗ್ಯಲಕ್ಷ್ಮೀ ಬಾಂಡ್, ಗೃಹ ಲಕ್ಷ್ಮೀ ಬಾಂಡ್ ಅನಾವರಣಗೊಳಿಸಲಾಗಿದೆ. ಅಧಿಕಾರಿಗಳು ಬಾಂಡ್‌ನಿಂದಾಗುವ ಲಾಭದ ಬಗ್ಗೆ ತಿಳಿಸಿ ಠೇವಣಿ ಸಂಗ್ರಹಣೆಗೆ ಆದ್ಯತೆ ನೀಡಬೇಕು, ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳು ಬ್ಯಾಂಕ್ ಉಳಿಸಿ ಹೋದರೆ ನಿವೃತ್ತಿ ಜೀವನ ಸುಖಕರವಾಗಿರುತ್ತದೆ ಎಂದರು.

ಸಾಲಕ್ಕಾಗಿ ಹಣ ಕೇಳಬೇಡಿ: ಸಾಲ ಮಂಜೂರು ಮಾಡಲು ರೈತರು, ಮಹಿಳೆಯರಿಂದ ಲಂಚ ಕೇಳುವುದು ತಪ್ಪು, ಈ ರೀತಿಯ ಅವ್ಯವಹಾರದಿಂದ ಬ್ಯಾಂಕಿನ ಬಗ್ಗೆ ಜನರಲ್ಲಿ ಅಪನಂಬಿಕೆ, ಅಗೌರವ ಉಂಟಾಗುತ್ತದೆ ಎಂದರು.

ಉಪಾಧ್ಯಕ್ಷರ ಆಗ್ರಹ: ಸಾಲ ಕೇಳಿಕೊಂಡು ಬರುವ ಜನರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ, ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಬಡ ರೈತರಲ್ಲಿ ಸಣ್ಣ ಪುಟ್ಟ ದಾಖಲೆ ಇಲ್ಲದಿದ್ದಾಗ ಸಾಲಕ್ಕೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡದೆ ತೊಂದರೆ ನೀಡುವುದು ಸಲ್ಲದು ಎಂದು ಬ್ಯಾಂಕ್ ಉಪಾಧ್ಯಕ್ಷ ನಾಗರಾಜು ಹೇಳಿದರು.

ನಿರ್ದೇಶಕರ ಆಕ್ಷೇಪ ಅರ್ಥ ಮಾಡಿಕೊಂಡ ಅಧ್ಯಕ್ಷರು, ದಾಖಲೆ ಇಲ್ಲದ ಕಡತಗಳನ್ನು ಸೊಸೈಟಿ ಹಂತದಲ್ಲೇ ತಿರಸ್ಕರಿಸಿದರೆ ಆರೋಪ ಬರುವುದಿಲ್ಲ, ಅಗತ್ಯ ದಾಖಲೆ ಇಲ್ಲದ ಅರ್ಜಿ ಬಂದಲ್ಲಿ ಪರಿಶೀಲಿಸಿ ಸೊಸೈಟಿಗೆ ವಾಪಸ್ ಕಳುಹಿಸಿ, ಜನರನ್ನು ಅಲೆದಾಡಿಸಬೇಡಿ ಎಂದರು. ನಿರ್ದೇಶಕ ಚನ್ನಿಗರಾಯಪ್ಪ, ಬ್ಯಾಂಕ್ ಎಜಿಎಂಗಳಾದ ಬೈರೇಗೌಡ, ಠೇವಣಿ ವಿಭಾಗದ ಉಸ್ತುವಾರಿ ಹುಸೇನಿ ಸಾಬ್ ದೊಡ್ಡಮನಿ ಇನ್ನಿತರರಿದ್ದರು.

ಠೇವಣಿ ಸಂಗ್ರಹಣೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಸುಧಾರಿಸಬೇಕು. ಸೊಸೈಟಿಗಳಲ್ಲಿ ಆಗಿರುವ ಠೇವಣಿ ಸಂಗ್ರಹಣೆಯಿಂದ ಬ್ಯಾಂಕ್ ಬಚಾವಾಗಿದೆ, ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನಿಂದ ನೆರವು ಸಿಗುವುದಕ್ಕೂ ಇದೇ ಕಾರಣ. ನಟರಾಜನ್,  ನಬಾರ್ಡ್ ಸೊಸೈಟಿಗಳಲ್ಲಿ ವಿವಿಧೋದ್ದೇಶ ಚಟುವಟಿಕೆ ನಡೆದಾಗ ಆರ್ಥಿಕ ಪ್ರಗತಿ ಹೆಚ್ಚಾಗುತ್ತದೆ, ವಿದ್ಯಾವಂತ ನಿರುದ್ಯೋಗಿಗಳು ಕೋಳಿ, ಕುರಿ, ಹಸು ಸಾಕಾಣೆಗೆ ಆಸಕ್ತಿ ತೋರಿದಲ್ಲಿ ಅಂತಹ ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಾಲ ನೀಡಿದರೆ ಯುವ ಜನರ ಬದುಕಿಗೆ ಆಧಾರವಾಗುತ್ತದೆ. ದ್ರಾಕ್ಷಾಯಿಣಿ, ಸಿಜಿಎಂ, ಅಪೆಕ್ಸ್ ಬ್ಯಾಂಕ್, ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net