

ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿಯವರ 9ನೇ ಪುಣ್ಯಸ್ಮರಣೆ ಅಂಗವಾಗಿ ಭಾರತೀಯ ಸಂಗೀತ ವಿದ್ಯಾಲಯವು ನಗರದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿರುವ ವಸುಂಧರಾ: ಮಹಿಳಾ ನೃತ್ಯ ಸಂಗೀತೋತ್ಸವದ 2ನೇ ದಿನವಾದ ಶನಿವಾರ ಗಾಯನ ನಿನಾದ ಸಂಗೀತಪ್ರಿಯ ಮನ ತಣಿಸಿತು.
ಆಸ್ಸಾಂನ ಸುಪ್ರಸಿದ್ಧ ಗಾಯಕಿ ಸಬೀನಾ ಮುಮ್ತಾಜ್ ಇಸ್ಲಾಂ ಅವರ ಗಾಯನಕ್ಕೆ ಶ್ರೋತೃಗಳು ತಲೆದೂಗಿದರು. ವೈವಿಧ್ಯಮಯ ಲಯಕಾರಿ ಹಾಗೂ ತಾನ್ಗಳಿಂದ ಗಾಯನಕ್ಕೆ ರಂಗು ತುಂಬಿದ ಸಬೀನಾ, ಠುಮರಿ, ದಾದ್ರಾ, ಕಜರಿ, ಟಪ್ಪಾ, ಗಜಲ್ಗಳನ್ನು ಪ್ರಸ್ತುತಪಡಿಸಿದರು. ಅವರಿಗೆ ಸಂಗೀತಾ ಅಗ್ನಿಹೋತ್ರಿ ತಬಲಾ, ನೀತಾ ಬೆಳೆಯೂರ ಹಾಮೋನಿಯಂ, ಶಾಂತಿ ಕುಲಕರ್ಣಿ ಹಾಗೂ ಅಪೇಕ್ಷಾ ದೇಶಪಾಂಡೆ ತಾನ್ಪುರದಲ್ಲಿ ಸಾಥ್ ನೀಡಿದ್ದು ವಿಶೇಷವಾಗಿತ್ತು.
ನಂತರ ನಡೆದ ಸಂಗೀತ ಕಛೇರಿಯಲ್ಲಿ ಮುಂಬೈನ ಚೇತನಾ ಪಾಠಕ ಗಾಯನದ ಮೂಲಕ ಸಂಗೀತ ಸುಧೆ ಹರಿಸಿದರು. ಟಪ್ಪಾ ಗಾಯನದ ವಿಶೇಷ ಅಭ್ಯಾಸಗೈದಿರುವ ಅವರು ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತ, ಠುಮರಿ, ದಾದರಾ, ಟಪ್ಪಾ ಗಾಯನ ಪ್ರಸ್ತುತಪಡಿಸಿದರು. ಅವರಿಗೆ ಸಾವನಿ ತಲವಲಕರ ತಬಲಾ, ಪರೋಮಿತಾ ಮುಖರ್ಜಿ ಹಾಮೋನಿಯಂ, ವಿದ್ಯಾ ಸಾಲಿಮಠ ಹಾಗೂ ರಮ್ಯಾ ಗಲಗಲಿ ತಾನ್ಪುರದಲ್ಲಿ ಸಾಥ್ ನೀಡಿದರು.
ಮಹಿಳಾ ನೃತ್ಯ ಸಂಗೀತೋತ್ಸವ ಹೆಸರಿಗೆ ತಕ್ಕಂತೆ ಮಹಿಳಾ ಪ್ರಧಾನ ಸಂಗೀತ ಕಛೇರಿಯಲ್ಲಿ ಹಾಜರಿದ್ದ ಸಭಿಕರು ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು. ಈ ಮೂಲಕ ಹಾಡು, ತಬಲಾ, ಹಾಮೋನಿಯಂ ಹಾಗೂ ತಾನ್ಪುರದ ಸಾಥ್ ಸಂಗತ್ವುಳ್ಳ ಸಂಗೀತೋತ್ಸವದ ಮೊದಲ ಪ್ರಯೋಗ ಸಂಗೀತ ಪರಿಸರದ ಧಾರವಾಡದಲ್ಲಿ ಯಶಸ್ವಿಯಾಗಿ ಜರುಗಿದ್ದು ಹಿರಿಮೆಗೆ ಪಾತ್ರವಾಯಿತು.