

ಕೋಲಾರ: ದೆಹಲಿ ಹಾಗೂ ಬೆಂಗಳೂರಿನಲ್ಲಿನ ಟ್ರ್ಯಾಕ್ಟರ್ ರ‌್ಯಾಲಿಗೆ ಬೆಂಬಲವಾಗಿ ಜಿಲ್ಲಾ ರೈತ ಸಂಘದ ಮುಖಂಡರು ನಗರದಲ್ಲಿ ಎತ್ತಿನ ಬಂಡಿ ಹಾಗೂ ನೇಗಿಲು ಹಿಡಿದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮಂಗಳವಾರ ವಿನೂತನವಾಗಿ ಪ್ರತಿಭಟಿಸಿತು.
ಅಲಂಕರಿಸಿದ ಟ್ರ್ಯಾಕ್ಟರ್, ಎತ್ತುಗಳೊಂದಿಗೆ ನಗರದ ಗಾಂಧಿವನದಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕೆಎಸ್‌ಆರ್‌ಟಿ ಬಸ್ ನಿಲ್ದಾಣ ವೃತ್ತದವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗುತ್ತಾ ರ‌್ಯಾಲಿ ನಡೆಸಿ ಪಿಎಸ್‌ಐ ಅಣ್ಣಯ್ಯ ಮುಖಾಂತರ ಮಾನ್ಯ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೇಂದ್ರ ಸರ್ಕಾರ ಜನಾಭಿಪ್ರಾಯವಿಲ್ಲದೆ ಏಕಾಏಕಿ ರೈತ, ದಲಿತ, ಕಾರ್ಮಿಕ, ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಬಡ ಕುಟುಂಬಗಳನ್ನು ಬೀದಿ ಪಾಲು ಮಾಡುವ ಜತೆಗೆ ಇಡೀ ದೇಶವನ್ನೇ ಖಾಸಗಿ ಕಂಪನಿ ಮಾಲೀಕರ ಕೈಗೆ ಕೊಟ್ಟು ಮತ್ತೆ ಗುಲಾಮಗಿರಿಗೆ ದೂಡಲು ಹೊರಟಿದೆ ಎಂದು ಟೀಕಿಸಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಕೃಷಿ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್ ಅಮಾನತಿನಲ್ಲಿಟ್ಟಿದ್ದರೂ ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ರೈತರ ಹೋರಾಟ ವಾಪಸ್ ಆಗುವುದಿಲ್ಲ. ಕೃಷಿ ಕಾಯ್ದೆಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ, ತೆರ‌್ನಹಳ್ಳಿ ಆಂಜನಪ್ಪ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಪ್ರಧಾನ ಕಾರ್ಯದರ್ಶಿ ಚಾಂದ್‌ಪಾಷಾ, ಮುಳಬಾಗಿಲು ಅಧ್ಯಕ್ಷ ಫಾರೂಕ್ ಪಾಷಾ, ಹಸಿರುಸೇನೆ ತಾಲೂಕು ಅಧ್ಯಕ್ಷ ಚಲಪತಿ, ಮಾಲೂರು ತಾಲೂಕು ಅಧ್ಯಕ್ಷ ಮಾಸ್ತಿವೆಂಕಟೇಶ್, ಮುಖಂಡರಾದ ಜಾವೀದ್ ಮಹಮದ್ ಶೋಯೀಬ್, ಸುಪ್ರೀಂಚಲ ಇತರರು ಭಾಗವಹಿಸಿದ್ದರು.