ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಕ್ಕೆ ಪಿಎಲ್‌ಡಿ ಬ್ಯಾಂಕ್‌ಗೆ ಮುತ್ತಿಗೆ

27BLH3
ಟ್ರ್ಯಾಕ್ಟರ್ ಜಪ್ತಿ ಮಾಡಿದ್ದನ್ನು ಖಂಡಿಸಿ ಪಿಎಲ್‌ಡಿ ಬ್ಯಾಂಕ್ ಮುಂಭಾಗ ರೈತರು ಪ್ರತಿಭಟಿಸಿದರು. ಸಿದ್ಧಗೌಡ ಮೋದಗಿ, ಶ್ರೀಕಾಂತ ಶಿರಹಟ್ಟಿ, ರಮೇಶ ವಾಲಿ, ಗೀತಾ ಧರೆಣ್ಣವರ, ಶಿವಲೀಲಾ ಮಿಸಾಳೆ ಇತರರಿದ್ದರು.
Published on

ಬೈಲಹೊಂಗಲ: ಸಾಲ ಮರುಪಾವತಿ ಮಾಡದ ರೈತನ ಟ್ರ್ಯಾಕ್ಟರ್‌ಅನ್ನು ಜಪ್ತಿ ಮಾಡಿದ್ದನ್ನು ಖಂಡಿಸಿ ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ ತಾಲೂಕು ಘಟಕ ಗುರುವಾರ ಪಿಎಲ್‌ಡಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ್ದಲ್ಲದೆ, ಬ್ಯಾಂಕ್‌ನ ಗೇಟ್ ಹಾಗೂ ಬಾಗಿಲಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದೆ.

ಸಂಘಟನೆ ಅಧ್ಯಕ್ಷ ಸಿದ್ಧಗೌಡ ಮೋದಗಿ ಮಾತನಾಡಿ, 2015ನೇ ಸಾಲಿನಲ್ಲಿ ನಾಗನೂರು ಗ್ರಾಮದ ರೈತ ಮಲ್ಲಪ್ಪ ಸಂಗಪ್ಪ ತಲ್ಲೂರ ಅವರು, ಬ್ಯಾಂಕ್‌ನಿಂದ ಟ್ರ್ಯಾಕ್ಟರ್ ಖರೀದಿಗೆ 7.58 ಲಕ್ಷ ರೂ. ಸಾಲ ಪಡೆದಿದ್ದರು. ಇದೀಗ ಅದು 12 ಲಕ್ಷ ರೂ. ಆಗಿದೆ.

4-5 ವರ್ಷದಿಂದ ಪ್ರಕೃತಿ ವಿಕೋಪದಿಂದ ಆರ್ಥಿಕ ಸಂಕಷ್ಟದಿಂದ ಹಣ ತುಂಬಲು ಆಗಿಲ್ಲ. ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರೂ ಬ್ಯಾಂಕ್‌ನವರು ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರೊನಾದಿಂದ ರೈತರು ತತ್ತರಿಸಿದ್ದು, ಸಾಲದ ಬಡ್ಡಿ ವಿನಾಯಿತಿಗೊಳಿಸಬೇಕು. ಅಸಲನ್ನು ಮಾತ್ರ ಗ್ರಾಹಕರ ಅನುಕೂಲದ ಮೇರೆಗೆ ಮರು ಪಾವತಿ ಪಡೆಯಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ, ಬ್ಯಾಂಕ್‌ನವರು ರೈತನಿಗೆ ನೋಟಿಸ್ ನೀಡಿದ್ದಾರೆ.

ಈ ಕುರಿತು ಸಹಕಾರಿ ಸಂಘಕ್ಕೆ ದೂರು ನೀಡಿದ್ದು, ಅದು ವಿಚಾರಣೆ ಹಂತಕ್ಕೆ ಬರುವ ಮುನ್ನವೇ ಟ್ರ್ಯಾಕ್ಟರ್ ಜಪ್ತಿ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸುದ್ದಿ ತಿಳಿದು ಆಗಮಿಸಿದ ಬ್ಯಾಂಕ್ ನಿರ್ದೇಶಕ ಶಿವಬಸು ಕುಡಸೋಮಣ್ಣವರ ಅವರು ರೈತ ಮುಖಂಡರ ಮನವೊಲಿಸಿ, ಮ್ಯಾನೇಜರ್ ಎಂ.ಟಿ.ಗಾಣಗೇರ ಅವರಿಗೆ ಬ್ಯಾಂಕ್‌ಗೆ ಬರುವಂತೆ ಸೂಚಿಸಿದರು. ಬಳಿಕ ಬ್ಯಾಂಕ್‌ಗೆ ಹಾಕಿದ್ದ ಬೀಗ ತೆರವುಗೊಳಿಸಿದರು. ಸಿಪಿಐ ಉಳವಪ್ಪ ಸಾತೇನಹಳ್ಳಿ, ಅಧ್ಯಕ್ಷ ಅಕ್ಷರ ಆನಿಕಿವಿ, ನಿರ್ದೇಶಕರಾದ ಶಂಕರ ಚಿಟ್ಟಿ, ಗಂಗಾಧರ ಹೊಂಡೇದ, ಪರ್ವತಗೌಡ ಪಾಟೀಲ, ಶ್ರೀಶೈಲ ಯಡಳ್ಳಿ, ಬಜೇರಿ ಮತ್ತು ರೈತ ಮುಖಂಡರ ಮಧ್ಯೆ ಮಾತುಕತೆ ನಡೆದವು. ಬಳಿಕ ಜಪ್ತಿ ಮಾಡಿದ ಟ್ರ್ಯಾಕ್ಟರ್‌ಅನ್ನು ರೈತನ ಮನೆಗೆ ಮುಟ್ಟಿಸಲಾಯಿತು.

ಅಲ್ಲದೆ, ಸಾಲಕ್ಕೆ ಸಂಬಂಧಿಸಿ ಆ ರೈತ ಎಷ್ಟು ಹಣ ಸಂದಾಯ ಮಾಡುತ್ತಾನೋ ಅಷ್ಟನ್ನು ಮಾತ್ರ ತುಂಬಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಶ್ರೀಕಾಂತ ಶಿರಹಟ್ಟಿ, ರಮೇಶ ವಾಲಿ, ಗೀತಾ ಧರೆಣ್ಣವರ, ಶಿವಲೀಲಾ ಮಿಸಾಳೆ, ಸಂಜೀವ ಡೊಂಗರಗಾವಿ, ಸಿದ್ರಾಮಯ್ಯ ಹಿರೇಮಠ, ರಮೇಶ ರಾಮಗೊಂಡನವರ, ಶೇಖರ ಅಕ್ಕನವರ, ಶಂಕರಯ್ಯ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net