ಟ್ರಾೃಕ್ಟರ್‌ಗೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಬಸ್

SRP_14-03jpj
Published on

ಶ್ರೀರಂಗಪಟ್ಟಣ: ತಾಲೂಕಿನ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಟ್ರಾೃಕ್ಟರ್‌ಗೆ ಡಿಕ್ಕಿಯಾಗಿ ಬಳಿಕ ಮತ್ತೊಂದು ದಿಕ್ಕಿನ ಹೆದ್ದಾರಿಗೆ ನುಗ್ಗಿ ಹಳ್ಳಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ.

ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮ ಮುಂಭಾಗದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ರಾಜ್ಯ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೋಗೆ ಸೇರಿದ ಬಸ್ ಇದಾಗಿದೆ. ಟ್ರಾೃಕ್ಟರ್ ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದನೆ. ಬಸ್ಸಿನಲ್ಲಿ ಚಾಲಕ ನಿರ್ವಾಹಕ ಹೊರತುಪಡಿಸಿ ಬೇರ‌್ಯಾರು ಪ್ರಯಾಣಿಕರಿಲ್ಲದ ಕಾರಣ ಹಾಗೂ ರಸ್ತೆಯಲ್ಲಿನ ಇತರ ವಾಹನಗಳ ಸವಾರರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ಸಿನ ಚಾಲಕ ಅಪಘಾತದಲ್ಲಿ ಗಾಯಗೊಂಡಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಸ್ ಚನ್ನಪಟ್ಟಣ ಬಳಿ ಅಪಘಾತಕ್ಕೀಡಾಗಿ ಬಳಿಕ ಠಾಣೆಯಲ್ಲಿ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಖಾಲಿ ಬಸ್ ಪುತ್ತೂರಿಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಶ್ರೀರಂಗಪಟ್ಟಣ ಟೌನ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ಹಳ್ಳದಲ್ಲಿ ಬಿದ್ದಿದ್ದ ಬಸ್ಸನ್ನು ಮೇಲೆ ಎತ್ತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net