

ಸಾಗರ: ತಾಲೂಕಿನಲ್ಲಿ ಟ್ರಾನ್ಸ್ಫಾರ್ಮರ್ ಗಳು ಸುಟ್ಟರೆ ಹೊಸದನ್ನು ಅಳವಡಿಸಲು ವಿಳಂಬನೀತಿ ಅನುಸರಿಸಲಾಗುತ್ತಿದೆ. ಸಭೆಗೆ ಉತ್ತರ ಕೊಡಲು ಉನ್ನತಮಟ್ಟದ ಅಧಿಕಾರಿಗಳು ಬರುತ್ತಿಲ್ಲ. ಅಂತಹವರಿಗೆ ನೋಟಿಸ್ ನೀಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಸಹಾಯಕ ನಿರ್ದೇಶಕ ಇಬ್ರಾಹಿಂ, ಆದಷ್ಟು ಟ್ರಾನ್ಸ್ಫಾರ್ಮರ್ ಗಳನ್ನು ಬದಲಿಸಿ ಕೊಡುತ್ತಿದ್ದೇವೆ. ಆದ್ಯತೆಯ ಮೇಲೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದಾಗ ಶಾಸಕರು ಗರಂ ಆದರು. ಸುಟ್ಟು ಹೋದ ಟ್ರಾನ್ಸ್ಫಾರ್ಮರ್ ಗಳನ್ನು ಬದಲಾಯಿಸುವುದರಲ್ಲಿ ಬೆಳೆಗಳು ನಾಶವಾಗುತ್ತವೆ. ನೀವು ಕಚೇರಿಯಲ್ಲಿ ಕುಳಿತುಬಿಡುತ್ತೀರಿ. ಉತ್ತರ ಕೊಡುವವರು ನಾವು ಎಂದು ಆಕ್ರೋಶ ವ್ಯಕ್ತಪಡಿಸಿದರು.
10 ವರ್ಷವಾದ್ರೂ ಉದ್ಘಾಟನೆ ಭಾಗ್ಯವಿಲ್ಲ: ತಾಲೂಕು ಆಡಳಿತದಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳು ತಕ್ಷಣ ಆರಂಭವಾಗಬೇಕು. ಮೀನು ಮಾರುಕಟ್ಟೆ ಕಟ್ಟಿ ಹತ್ತು ವರ್ಷಗಳಾಗುತ್ತಾ ಬಂತು ಇನ್ನೂ ಅದರ ಉದ್ಘಾಟನೆ ಆಗಿಲ್ಲ. ಸಣ್ಣಪುಟ್ಟ ಕಾಮಗಾರಿಗಳನ್ನು ಪೂರೈಸಲಾಗಿದೆ. ಕೂಡಲೆ ಜನರ ಉಪಯೋಗಕ್ಕೆ ಅದನ್ನು ನೀಡಬೇಕು. ಮೀನು ಮಾರುಕಟ್ಟೆ ಎಂದರೆ ಮೂಗು ಮುಚ್ಚಿ ಖರೀದಿಗೆ ಹೋಗುವಂತಾಗಬಾರದು, ಕಾಗೋಡು ತಿಮ್ಮಪ್ಪನವರ ವಿಶೇಷ ಪ್ರಯತ್ನದಿಂದ ಇದು ನಿರ್ಮಾಣವಾದರೂ ಕಳೆದ ಸಾಲಿನಲ್ಲಿ ಇಚ್ಛಾಶಕ್ತಿ ಇಲ್ಲದೆ ಇದು ಉದ್ಘಾಟನೆ ಆಗಲಿಲ್ಲ, ಈಗ ಅದನ್ನು ಸರಿಪಡಿಸೋಣ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು.
ಮಿನಿ ವಿಧಾನಸೌಧ ರೆಡಿ: ಈ ತಿಂಗಳ ಕೊನೇ ಅಥವಾ ಅಕ್ಟೋಬರ್ ತಿಂಗಳ ಆರಂಭದಲ್ಲಿ ಮಿನಿ ವಿಧಾನಸೌಧವನ್ನು ಜನರ ಸೇವೆಗೆ ಅರ್ಪಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ್ ತಿಳಿಸಿದರು.